ಹಳೆಯ ದ್ವೇಷಕ್ಕೆ ಹರಿದ ನೆತ್ತರು: ಮಗನ ಜೀವ ಉಳಿಸಲು ಯತ್ನಿಸಿದ ತಾಯಿ ಮಚ್ಚಿನೇಟಿಗೆ ಬಲಿ

Nov 10, 2025 - 19:04
 0  1.9k
ಹಳೆಯ ದ್ವೇಷಕ್ಕೆ ಹರಿದ ನೆತ್ತರು: ಮಗನ ಜೀವ ಉಳಿಸಲು ಯತ್ನಿಸಿದ ತಾಯಿ ಮಚ್ಚಿನೇಟಿಗೆ ಬಲಿ
Photo credit: TV09

ಶಿವಮೊಗ್ಗ, ನ. 10: ಮಗನ ಜೀವ ಉಳಿಸಲು ಧಾವಿಸಿದ ತಾಯಿಯೇ ಮಚ್ಚಿನೇಟಿಗೆ ಬಲಿಯಾದ ಹೃದಯ ಕಲುಕುವ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದ ಸಿದ್ದೇಶ್ವರ ಬಡಾವಣೆಯಲ್ಲಿ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ಗಂಗಮ್ಮ (45) ಎಂದು ಗುರುತಿಸಲಾಗಿದ್ದು, ಆರೋಪಿ ಹರೀಶ್ ಮತ್ತು ನಾಗೇಶ್ ಅವರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಆರೋಪಿಗಳಾದ ಹರೀಶ್ ಹಾಗೂ ನಾಗೇಶ್ ಬೈಕಿನಲ್ಲಿ ತೆರಳುತ್ತಿದ್ದಾಗ ಅದೇ ಬಡಾವಣೆಯ ಮಂಜುನಾಥ್ ಎಂಬ ವ್ಯಕ್ತಿಯ ಮೇಲೆ ಕಲ್ಲು ಎಸೆದು ಹಲ್ಲೆ ನಡೆಸಿದ್ದರು. ಗಾಯಗೊಂಡ ಮಂಜುನಾಥ್ ಗೆ ಗಂಗಮ್ಮ ಮಾನವೀಯತೆಯಿಂದ ನೆರವಾಗಿ ತಲೆಗೆ ಅರಿಶಿಣ ಹಚ್ಚಿ, ನೀರು ಕುಡಿಸಿದ್ದರು.

ಇದಕ್ಕೆ ಕೋಪಗೊಂಡ ಆರೋಪಿಗಳು, “ನಾವು ಹೊಡೆದವರಿಗೆ ನೀವು ಉಪಚರಿಸುತ್ತೀರಾ?” ಎಂದು ಗಂಗಮ್ಮ ಅವರ ಪುತ್ರ ಜೀವನ್ ಬಳಿ ಗಲಾಟೆ ಶುರುಮಾಡಿ, ಬಳಿಕ ಮನೆಯಿಂದ ಮಚ್ಚು ತಂದು ಜೀವನ್ ಮೇಲೆ ಬೀಸಲು ಯತ್ನಿಸಿದ್ದಾರೆ. ಈ ವೇಳೆ ಮಧ್ಯೆ ಬಂದು ಮಗನನ್ನು ರಕ್ಷಿಸಲು ಯತ್ನಿಸಿದ ಗಂಗಮ್ಮ ಅವರ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮಚ್ಚಿನೇಟು ಬಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ತುಂಗಾನಗರ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ, ಕೊಲೆ ಬಳಿಕ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ಕೊಲೆಗೆ ಹಳೆಯ ದ್ವೇಷವೇ ಕಾರಣವಾಗಿದೆ. ಮೃತ ಗಂಗಮ್ಮ ಅವರ ಪುತ್ರ ಜೀವನ್ ಹಾಗೂ ಆರೋಪಿಗಳ ನಡುವೆ ಹಿಂದಿನಿಂದಲೂ ವೈಷಮ್ಯ ಇತ್ತು. ಆರೋಪಿಗಳು ಜೀವನ್ ಸಂಬಂಧಿಕರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದು, ಬಾಡಿಗೆ ಹಣ ನೀಡದೆ ಹೋಗಿದ್ದರು. ಈ ಕುರಿತು ಜೀವನ್ ಹಣ ನೀಡುವಂತೆ ಕೇಳಿದಾಗ ಇವರ ನಡುವೆ ವಾಗ್ವಾದ ನಡೆದಿತ್ತು. ಆ ಬಳಿಕ ಆರೋಪಿಗಳು ಜೀವನ್ ಜೊತೆ ದ್ವೇಷ ಬೆಳೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

What's Your Reaction?

Like Like 2
Dislike Dislike 0
Love Love 2
Funny Funny 0
Angry Angry 1
Sad Sad 4
Wow Wow 0