ಲೈಂಗಿಕ ಸಮಸ್ಯೆ ಪರಿಹಾರ ಹೆಸರಿನಲ್ಲಿ ಟೆಕ್ಕಿಗೆ 48 ಲಕ್ಷ ರೂ.ವಂಚನೆ; ಕಿಡ್ನಿಗೆ ಹಾನಿ: ‘ಗುರೂಜಿ’ ಬಂಧನ

Dec 2, 2025 - 10:12
 0  524
ಲೈಂಗಿಕ ಸಮಸ್ಯೆ ಪರಿಹಾರ ಹೆಸರಿನಲ್ಲಿ ಟೆಕ್ಕಿಗೆ 48 ಲಕ್ಷ ರೂ.ವಂಚನೆ; ಕಿಡ್ನಿಗೆ ಹಾನಿ: ‘ಗುರೂಜಿ’ ಬಂಧನ
Photo credit: TV09

ಬೆಂಗಳೂರು, ಡಿ. 2: ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ಐಟಿ ಉದ್ಯೋಗಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಹಾಗೂ ನೀಡಿದ ಮಿಶ್ರಣದಿಂದ ಕಿಡ್ನಿ ಹಾನಿಗೆ ಕಾರಣನಾದ ವಿಜಯ್ ಗುರೂಜಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ತೇಜಸ್ ನೀಡಿದ ದೂರು ಆಧಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗಾಗ್ಗೆ ಹೋಗುತ್ತಿದ್ದ ತೇಜಸ್, ರಸ್ತೆ ಪಕ್ಕದ ಟೆಂಟ್‌ನಲ್ಲಿ “ಲೈಂಗಿಕ ಸಮಸ್ಯೆಗೆ ಚಿಕಿತ್ಸೆ’’ ಎಂಬ ಫಲಕ ನೋಡಿದ ಬಳಿಕ ಒಳಗೆ ಹೋಗಿದ್ದರು. ಅಲ್ಲಿ ಪರಿಚಯವಾದ ವ್ಯಕ್ತಿ ವಿಜಯ್ ಗುರೂಜಿಯನ್ನು ಚಿಕಿತ್ಸಕನಾಗಿ ಪರಿಚಯಿಸಿದ್ದ. ಆಯುರ್ವೇದ ಮೂಲಕ ಸಮಸ್ಯೆ ಪರಿಹಾರವಾಗುತ್ತದೆ ಎಂದು ಭರವಸೆ ನೀಡಿದ ಗುರೂಜಿ, 1 ಗ್ರಾಂ ಮಿಶ್ರಣಕ್ಕೆ 1.60 ಲಕ್ಷ ರೂ. ದರ ನಿಗದಿ ಮಾಡಿ, ಯಶವಂತಪುರದ ಆಯುರ್ವೇದಿಕ್ ಶಾಪ್‌ನಿಂದ ಮಾತ್ರೆಗಳು ಹಾಗೂ ಮಿಶ್ರಣಗಳನ್ನು ಖರೀದಿಸಲು ಸೂಚಿಸಿದ್ದಾನೆ.

ಆನ್‌ಲೈನ್ ಪೇಮೆಂಟ್ ಮಾಡಬಾರದು, ಯಾರನ್ನೂ ಜೊತೆಗೆ ಕರೆತರುವಂತಿಲ್ಲವೆಂಬ ಷರತ್ತುಗಳ ನಡುವೆ ತೇಜಸ್ ಹಲವು ಬಾರಿ ಔಷಧಿ ಖರೀದಿಸಿ ಒಟ್ಟು 48 ಲಕ್ಷ ರೂ. ವ್ಯಯಿಸಿದ್ದರು. ಆದರೆ ಔಷಧಿ ಸೇವನೆ ಬಳಿಕ ಆರೋಗ್ಯ ಸುಧಾರಣೆಯಾಗದೆ, ಕಿಡ್ನಿ ಸಮಸ್ಯೆ ಗಂಭೀರವಾಗುತ್ತಿದ್ದಂತೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಿಶ್ರಣವೇ ಹಾನಿಗೆ ಕಾರಣ ಎಂಬುದು ಬಹಿರಂಗವಾಯಿತು.

ಚಿಕಿತ್ಸೆ ಪರಿಣಾಮದ ಬಗ್ಗೆ ಪ್ರಶ್ನಿಸಿದಾಗ ಗುರೂಜಿ ತೇಜಸ್‌ಗೆ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತೇಜಸ್ ನೀಡಿದ ಮಾಹಿತಿ ಆಧಾರವಾಗಿ ಜ್ಞಾನಭಾರತಿ ಪೊಲೀಸರು ವಿಜಯ್ ಗುರೂಜಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಮಿಶ್ರಣ ಪೂರೈಕೆ ಮಾಡಿದ ಆಯುರ್ವೇದಿಕ್ ಅಂಗಡಿಯ ವಿರುದ್ದವೂ ತನಿಖೆ ಮುಂದುವರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 2
Wow Wow 0