ಐಗೂರು ಗ್ರಾಮದ ಕಾಜೂರಿನಲ್ಲಿ ಯಶಸ್ವಿಯಾಗಿ ನಡೆದ ಸೋಮವಾರಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾಮದ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಸೋಮವಾರಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಮಲ್ಳಳ್ಳಿ ಜಲಪಾತದ ಅಭಿವೃದ್ಧಿಯಾಗಬೇಕು ಎಂಬ ಒತ್ತಾಯ ಇದೆ, ಮಕ್ಕಳಗುಡಿ ಬೆಟ್ಟದ ಅಭಿವೃದ್ಧಿಯಾಗಬೇಕು ಎಂಬ ಕೂಗು ಇದೆ., ಮಾದಾಪುರದಲ್ಲಿ ಪಿಯು ಕಾಲೇಜು ನಿರ್ಮಾಣ ಮಾಡಬೇಕು ಎಂಬ ಮನವಿ ಇದೆ, ಕೃಷಿ ಕಾರ್ಮಿಕರಿಗೆ ನಿವೇಶನ ಬೇಕು ಎಂಬ ಆಗ್ರಹ ಇದೆ. ಇದರೊಂದಿಗೆ ಇನ್ನೂ ಇರುವ ಹಲವು ಬೇಡಿಕೆಗಳಿಗೆ ಸ್ಪಂದಿಸುವೆ. ಜೊತೆಗೆ, ಈಚೆಗೆ ಆಕಸ್ಮಿಕ ಬೆಂಕಿಯಿಂದ ಮನೆಯನ್ನು ಕಳೆದುಕೊಂಡವರಿಗೆ ಸಹಾಯ ಹಸ್ತ ಚಾಚುವೆ ಎಂದು ಭರವಸೆ ನೀಡಿದರು.
‘ಇತಿಹಾಸವನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಇತಿಹಾಸದೊಂದಿಗೆ ನಮಗೆ ಮುಂದಿನ ದೂರದೃಷ್ಟಿಯೂ ಇರಬೇಕು. ಕನ್ನಡ ಭಾಷೆಯು ಕೊಡಗಿನಲ್ಲಿ ನಮ್ಮನ್ನೆಲ್ಲ ಒಂದು ಮಾಡಿದೆ. ಸಾಹಿತಿಗಳಿಗೆ ಪ‍್ರೋತ್ಸಾಹ ಕೊಡುವುದು ನನ್ನ ಜವಾಬ್ದಾರಿ. ಹಾಗಾಗಿ, ಈ ಸಮ್ಮೇಳನದ ಯಶಸ್ವಿಗೆ ಒಂದಿಷ್ಟು ಸಹಕಾರ ನೀಡಿರುವೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷೆ ಜಲಜಾ ಶೇಖರ್ ಮಾತನಾಡಿ, ‘‘ನಾವು ಎಲ್ಲಾ ಭಾಷೆಗಳನ್ನು ಕಲಿಯೋಣ. ಕನ್ನಡಕ್ಕೆ ಆದ್ಯತೆ ಕೊಡೋಣ’ ಎಂದರು.
‘ಅನ್ಯರಾಜ್ಯದಿಂದ ಬಂದು ನೆಲಸಿರುವವರಿಗೆ ಕನ್ನಡ ಕಲಿಯಲೇ ಬೇಕೆಂಬ ಅನಿವಾರ್ಯತೆಯನ್ನು ನಾವು ಸೃಷ್ಟಿಸಿಲ್ಲ. ಒಂದು ಭಾಷೆಯ ಅಳಿವು - ಉಳಿವು ನಿರ್ಧಾರವಾಗುವುದು ಆ ಭಾಷೆಯನ್ನು ಎಷ್ಟು ಬಳಸುತ್ತಿದ್ದಾರೆ? ಜನ-ಜೀವನವನ್ನು ಎಷ್ಟು ತುಂಬಿಕೊಂಡಿದೆ? ಭಾಷೆಗೆ ಎಷ್ಟು ಮಹತ್ವ ನೀಡುತ್ತಿದ್ದಾರೆ ಎಂಬುದರ ಮೇಲೆ ನಿಂತಿದೆ. ಹಾಗಾಗಿ, ಎಲ್ಲರೂ ಕನ್ನಡವನ್ನು ಹೆಚ್ಚು ಬಳಸಬೇಕು ಎಂದು ಹೇಳಿದರು.
‘ಡಿಜಿಟಲ್ ಸ್ಕ್ರೀನ್’ ಸಮಯ ಹೆಚ್ಚಳದಿಂದ ಮಕ್ಕಳಲ್ಲಿ ಹಿಂಸೆ, ದ್ವೇಷದ ಗುಣಗಳ ಜೊತೆಗೆ ಎಲ್ಲವನ್ನು ಪ್ರತಿಸ್ಪರ್ಧಿಯಂತೆ ಭಾವಿಸುವ ಗುಣಗಳು ಹೆಚ್ಚಾಗುತ್ತಿವೆ. ಮಕ್ಕಳನ್ನು ಮನುಷ್ಯರನ್ನಾಗಿಸಲು ಪುಸ್ತಕ ಪ್ರೀತಿಯ ಬೀಜ ಬಿತ್ತಬೇಕು. ಸಾಹಿತಿಗಳು ಬರೆದ ಪುಸ್ತಕಗಳನ್ನು ಕೊಂಡು ಓದಬೇಕು ಎಂದರು.
ಅಪಘಾತವಾದಾಗ ಇಂದಿನ ಮಕ್ಕಳು ನಿರ್ಲಿಪ್ತರಾಗಿ ಅದನ್ನು ನೋಡುತ್ತಾರೆ. ಅವರಲ್ಲಿ ಮಾನವ ಸಹಜವಾದ ಅನುಕಂಪ ಮೂಡುವುದೇ ಇಲ್ಲ. ಮಕ್ಕಳಿಗೆ, ವಯೋಸಹಜ ಅನುಕಂಪ, ಪ್ರೀತಿಯನುಭೂತಿ ಕಡಿಮೆಯಾಗಲು ಕಾರಣ, ಹೆಚ್ಚುತ್ತಿರುವ ಅವರ ‘ಸ್ಕೀನ್ ಸಮಯ’. ಮಕ್ಕಳಲ್ಲಿ ದಯೆ ಮತ್ತು ಜಗದ ಕಾರುಣ್ಯ ಮರೆಯಾಗುತ್ತಿರುವ ಬಗ್ಗೆ ನಾವೆಲ್ಲ ಕಾಳಜಿ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು..
ಮುಖ್ಯ ಭಾಷಣ ಮಾಡಿದ ಮೈಸೂರಿನ ಸಾಹಿತಿ ಜಯಪ್ಪ ಹೊನ್ನಾಳಿ ‘ನಾವು ನವೆಂಬರ್ ಕನ್ನಡಿಗರಾಗದೇ, ‘ನಾವೆಂಬರು ಕನ್ನಡಿಗರು’ ಅಥವಾ ‘ನಂಬರ್ ಒನ್ ’ಕನ್ನಡಿಗರಾಗಬೇಕು. ಭಾಷೆಯ ವಾರಸುದಾರರಾದ ನಮಗೆ ಅಭಿಮಾನ ಇರಬೇಕು’ ಎಂದು ಪ್ರತಿಪಾದಿಸಿದರು.
‘ಕಾಯಬೇಕಾದ ಕನ್ನಡಿಗರೇ ಇಂದು ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕನ್ನಡದ ನೆಲದಲ್ಲೇ ಕನ್ನಡವನ್ನು ಉಳಿಸಿ, ಬೆಳೆಸಿ ಎಂದು ಕೇಳಿಕೊಳ್ಳುವ ಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಶ.ಗ.ನಯನಾತಾರಾ ಮಾತನಾಡಿ, ಹಳ್ಳಿಗಳಲ್ಲಿ ನಡೆಯುವ ಇಂತಹ ಸಮ್ಮೇಳನದಿಂದ ಕನ್ನಡದ ಅಭಿವೃದ್ಧಿಯಾಗುತ್ತದೆ, ಏಕತೆ ಮೂಡುತ್ತದೆ ಎಂದು ಹೇಳಿದರು.
‘ಹಿಂದೆ ಕೊಡಗಿನಲ್ಲಿ ಸಾಹಿತಿಗಳಿಲ್ಲ ಎಂದು ಮೂಗು ಮುರಿಯುತ್ತಿದ್ದರು. ಆದರೆ, ಈಗ ಕೊಡಗಿನಲ್ಲಿ ಸಾಹಿತಿಗಳು ತುಂಬಿ ತುಳುಕುತ್ತಿದ್ದು, ಮೂಗು ಮುರಿದವರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಮಾತನಾಡಿ, ‘ಕನ್ನಡ ಉಳಿಸಿ ಬೆಳಸಲು ತಾಲ್ಲೂಕು ಹೋಬಳಿ ಮಟ್ಟದಲ್ಲೂ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡದಿದೆ. ಕನ್ನಡ ನುಡಿ ಬೆಳಸಲಿ ಸಮ್ಮೇಳನ ಸಹಕಾರಿ. ಈ ಸಮ್ಮೇಳನದ ಯಶಸ್ವಿಗಾಗಿ 11 ಸಮಿತಿ ರಚನೆ ಮಾಡಿದ್ದೇವೆ. 11 ದ್ವಾರಗಳ ನಿರ್ಮಾಣ ಮಾಡಲಾಗಿದೆ. ಮಹನೀಯರ ತ್ಯಾಗ ಸಾಧನೆ ಗೊತ್ತಾಗಬೇಕು ಎಂಬ ಕಾರಣಕ್ಕೆ ದ್ವಾರ ನಿರ್ಮಿಸಿದ್ದೇವೆ ಎಂದರು.
ಸಮ್ಮೇಳನದಲ್ಲಿ ಜಲಜಾ ಶೇಖರ್ ಅವರ ನಿರುತ್ತರ, ಬೆಸೂರು ಮೋಹನ್ ಪಾಳೇಗಾರ್ ಅವರ ‘ಕಾಂಪೌಂಡ್‌ಗೆ ಬಣ್ಣ ಮನೆಗೆ ಸುಣ್ಣವಿಲ್ಲ’, ಜಲಾ ಕಾಳಪ್ಪ ಅವರ ನೆಮ್ಮದಿ, ಶರ್ಮಿಳಾ ರಮೇಶ್ ಅವರ ಭವಭಾವದೆಡೆಗೆ ವಿಕಾಸದ ಕ್ಷಣ, ಲಾವಣ್ಯ ಮೋಹನ್ ಅವರ ಪುಷ್ಕರಿಣಿ, ಯಶಸ್ವಿ ಗಣೇಶ್ ಅವರ ಸಪ್ತ ಸ್ವರ ತಾಣ ಪುಸ್ತಕಗಳನ್ನು ಹಾಗೂ ಸಮ್ಮೇಳನದ ಸ್ಮರಣ ಸಂಚಿಕೆ ‘ಐಗೂರಿನ ಐಸಿರಿ’ಯ ಮುಖಪುಟವನ್ನು ಬಿಡುಗಡೆ ಮಾಡಲಾಯಿತು.
ಇದಕ್ಕೂ ಮುನ್ನ ಸಮ್ಮೇಳನ ಉದ್ಘಾಟಿಸಿದ ಹಿರಿಯ ಮುಖಂಡ ಬಿ.ಎ.ಜೀವಿಜಯ, ‘ಅಜ್ಞಾನಕ್ಕೆ ಸಾವಿದೆ, ಜ್ಞಾನಕ್ಕೆ ಸಾವಿಲ್ಲ’ ಎಂದರು. ಕನ್ನಡ ಸಾಹಿತ್ಯದ ಪರಿವರ್ತನೆಯ ಘಟ್ಟಗಳನ್ನು ವಿವರಿಸಿದರು.
ಇದಕ್ಕೂ ಮುನ್ನ ಧ್ವಜಾರೋಹಣದ ಮೂಲಕ ಸಮ್ಮೇಳನ ಆರಂಭವಾಯಿತು. ಸಾಧಕರ ಹೆಸರಿನಲ್ಲಿದ್ದ ದ್ವಾರಗಳನ್ನು ಉದ್ಘಾಟಿಸಲಾಯಿತು. ಕಬ್ಬಿಣದ ಸೇತುವೆ ಸಮೀಪದಿಂದ ಹೊರಟ ಸಮ್ಮೇಳನದ ಸರ್ವಾಧ್ಯಕ್ಷೆ ಜಲಜಾ ಶೇಖರ್ ಅವರ ಮೆರವಣಿಗೆಯು ಐಗೂರು–ಯಡವಾರೆ ಮಾರ್ಗವಾಗಿ ಕಾಜೂರು ಅರಣ್ಯ ವಸತಿಗೃಹದ ಮೂಲಕ ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ತಲುಪಿತು. ಮಂಗಳವಾದ್ಯಗಳು, ಪೂರ್ಣಕುಂಭ, ವಿವಿಧ ಕಲಾತಂಡಗಳು, ಸ್ತಬ್ದಚಿತ್ರಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಪುಸ್ತಕ ಮಾರಾಟ ಸೇರಿದಂತೆ ವಿವಿಧ ಬಗೆಯ ಹತ್ತಾರು ಮಳಿಗೆಗಳು ಅಲ್ಲಿದ್ದವು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಕ್ತದಾನ ಶಿಬಿರವೂ ನಡೆಯಿತು.
ಜ್ಯೋತಿ ಅರುಣ್ ಅವರ ನಿರೂಪಣೆ, ಗಂಧರ್ವ ಕಲಾ ತಂಡದವರ ರೈತ ಗೀತೆ, ಕಾಜೂರು ಐಗೂರು ಶಾಲಾ ಶಿಕ್ಷಕರಿಂದ ನಾಡಗೀತೆಗಳು ಗಮನ ಸೆಳೆದವು.
ಕಾಫಿ ಬೆಳೆಗಾರರಾದ ವಿನೋದ್ ಶಿವಪ್ಪ, ಕೆ.ಪಿ.ಚಂದ್ರಕಲಾ, ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಶ.ಗ.ನಯನತಾರಾ, ಪರಿಷತ್ತಿನ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಟಿ.ವಿಜೇತ್, ಐಗೂರು ಹೋಬಳಿ ಘಟಕದ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಪರಿಷತ್ತಿನ ಪದಾಧಿಕಾರಿಗಳಾದ ಎಸ್.ಐ.ಮುನೀರ್ ಅಹಮ್ಮದ್, ಎಸ್.ಎಸ್.ಸಂಪತ್ ಕುಮಾರ್, ಕಡ್ಲೇರ ತುಳಸಿ ಮೋಹನ್, ರೇವತಿ ರಮೇಶ್, ಕೆ.ಎ.ನಾಗೇಶ್, ಮುಖಂಡರಾದ ಕೆ.ಪಿ.ಚಂದ್ರಕಲಾ, ಕೆ.ಎನ್.ದೇವರಾಜು, ವಿ.ಪಿ.ಶಶಿಧರ್, ತಹಶಿಲ್ದಾರ ಕೆ.ಕೆ.ಕೃಷ್ಣಮೂರ್ತಿ ಭಾಗವಹಿಸಿದ್ದರು.