ಬಡವರ ಮತಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ,ಬಡವರಿಗೆ ನಿವೇಶನ ಮತ್ತು ವಸತಿ ಸೌಲಭ್ಯವನ್ನು ನೀಡದೆ ವಂಚಿಸಿದೆ;ಎಚ್.ಎಂ ಸೋಮಪ್ಪ

Feb 28, 2026 - 18:33
 0  213
ಬಡವರ ಮತಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ,ಬಡವರಿಗೆ ನಿವೇಶನ ಮತ್ತು ವಸತಿ ಸೌಲಭ್ಯವನ್ನು ನೀಡದೆ ವಂಚಿಸಿದೆ;ಎಚ್.ಎಂ ಸೋಮಪ್ಪ

ಮಡಿಕೇರಿ: ಬಡವರ ಮತಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಬಡವರಿಗೆ ನಿವೇಶನ ಮತ್ತು ವಸತಿ ಸೌಲಭ್ಯವನ್ನು ನೀಡದೆ ವಂಚಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿಯ ಕೊಡಗು ಜಿಲ್ಲಾ ಘಟಕಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿವೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಅವರು, ೨೦೦೭ ರಿಂದ ನಮ್ಮ ಸಂಘಟನೆ ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ನಿವೇಶನ ಮತ್ತು ವಸತಿ ರಹಿತ ಬಡವರಿಗೆ, ದಲಿತರಿಗೆ, ಕಾರ್ಮಿಕರಿಗೆ, ಸರ್ವ ದುಡಿಯುವ ವರ್ಗಕ್ಕೆ ನಿವೇಶನ ಹಾಗೂ ವಸತಿಯನ್ನು ನೀಡಬೇಕೆಂದು ಹೋರಾಟ ನಡೆಸುತ್ತಲೇ ಬಂದಿದೆ. ಆದರೆ ಇಲ್ಲಿಯವರೆಗೆ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಬಡವರ ಈ ಬೇಡಿಕೆಗಳನ್ನು ಈಡೇರಿಸಿಲ್ಲ. ರಾಜಕೀಯ ಪಕ್ಷಗಳಿಗೆ ಬಡವರ ಮತಗಳು ಬೇಕು, ಆದರೆ ಬಡವರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎನ್ನುವ ಜವಾಬ್ದಾರಿ ಇಲ್ಲದಾಗಿದೆ.

ಪ್ರಸ್ತುತ ಇರುವ ಕಾಂಗ್ರೆಸ್ ಸರ್ಕಾರ ಕೂಡ ಶೋಷಿತರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಐಟಿಡಿಪಿ ಅಧಿಕಾರಿಯೊಬ್ಬರು ವಿರಾಜಪೇಟೆ ಭಾಗದಲ್ಲಿ ಸುಮಾರು ೩ ಸಾವಿರ ನಿವೇಶನಗಳ ಮಂಜೂರಾತಿಗೆ ಒಪ್ಪಿಗೆ ದೊರೆತ್ತಿದೆ. ಇದು ಶಾಸಕರ ಪ್ರಯತ್ನದ ಫಲ ಎಂದು ಹೇಳಿಕೆ ನೀಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಬಡವರಿಗೆ ನಿವೇಶನ ಅಥವಾ ವಸತಿ ದೊರೆಯಬೇಕಾದರೆ ಅದು ನಮ್ಮ ಹೋರಾಟದ ಫಲವೇ ಹೊರತು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಆಸಕ್ತಿಯಿಂದ ಅಲ್ಲವೆಂದು ತಿಳಿಸಿದರು. ೨೦೨೦-೨೦೨೨ ರವರೆಗೆ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜಾಗವನ್ನು ಗುರುತು ಮಾಡಲಾಗಿತ್ತು. ಅದು ನಮ್ಮ ಪಕ್ಷ ಮತ್ತು ಸಂಘಟನೆಯ ಹೋರಾಟದ ಫಲವಾಗಿದೆ. ಶಾಸಕರುಗಳು ಆಯ್ಕೆಯಾಗಿರುವುದೇ ಜನಸೇವೆಗಾಗಿ, ಜನರ ಹಕ್ಕುಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುವುದಕ್ಕಾಗಿ. ಆದರೆ ಕೊಡಗು ಜಿಲ್ಲೆಯಲ್ಲಿ ಇಂದಿಗೂ ಸಾವಿರಾರು ಕುಟುಂಬಗಳು ಸ್ವಂತ ಮನೆ, ನಿವೇಶನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕೊಡಗು ಜಿಲ್ಲೆಯ ಇಬ್ಬರು ಶಾಸಕರುಗಳಿಗೆ ಪರಿಶಿಷ್ಟರು, ಕಾರ್ಮಿಕರು ಹಾಗೂ ಎಲ್ಲಾ ದುಡಿಯುವ ವರ್ಗದ ಮೇಲೆ ನೈಜ ಕಾಳಜಿ ಇದ್ದರೆ ಮುಂದಿನ ಚುನಾವಣೆಯೊಳಗೆ ಎಲ್ಲಾ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡಬೇಕು. ನಿರ್ಲಕ್ಷ್ಯ ವಹಿಸಿದರೆ ಇಬ್ಬರು ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್.ಎಂ.ಸೋಮಪ್ಪ ಎಚ್ಚರಿಕೆ ನೀಡಿದರು. ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಎಚ್.ರಫೀಕ್ ಮಾತನಾಡಿ, ಪ್ರಸ್ತುತ ವಿರಾಜಪೇಟೆ ಭಾಗದ ೩ ಸಾವಿರ ಫಲಾನುಭವಿಗಳಿಗೆ ನಿವೇಶನ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ, ನಾಡಿನಲ್ಲಿರುವ ಬಡವರಿಗೆ ನಾಗರಿಕ ಸಂಪರ್ಕವಿಲ್ಲದ ಕಾಡು ಪ್ರದೇಶದಲ್ಲಿ ನಿವೇಶನ ಗುರುತಿಸಿರುವುದು ಸರಿಯಲ್ಲ, ಇದನ್ನು ಸಿಪಿಐ ವಿರೋಧಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ದಲಿತ ಮೂವ್ ಮೆಂಟ್‌ನ ರಾಜ್ಯ ಮುಖಂಡ ಮಾಯಮುಡಿ ರಮೇಶ್, ಸಿಪಿಐ ಪಕ್ಷದ ಸೋಮವಾರಪೇಟೆ ಕಾರ್ಯದರ್ಶಿ ಎಸ್.ಹೆಚ್.ಶಬಾನಾ ಉಪಸ್ಥಿತರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1