ಸಾಲದ ಶೂಲದಿಂದ ಪಾರಾಗಲು ಎಟಿಎಂಗೆ ತುಂಬುವ 7.11 ಕೋಟಿ ರೂ. ಹಣ ದರೋಡೆ ಮಾಡಿದ್ದ ಆರೋಪಿಗಳು!

Nov 23, 2025 - 12:19
 0  1.1k
ಸಾಲದ ಶೂಲದಿಂದ ಪಾರಾಗಲು ಎಟಿಎಂಗೆ ತುಂಬುವ 7.11 ಕೋಟಿ ರೂ. ಹಣ ದರೋಡೆ ಮಾಡಿದ್ದ ಆರೋಪಿಗಳು!
Photo credit: TV09 (ವಶಪಡಿಸಿಕೊಂಡ ಹಣ)

ಬೆಂಗಳೂರು, ನ. 23: ಎಟಿಎಂಗಳಿಗೆ ನಗದು ಸಾಗಿಸುತ್ತಿದ್ದ ವಾಹನವನ್ನು ತಡೆದು ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣವನ್ನು ನಗರ ಪೊಲೀಸರು ಭೇದಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಸಾಲದ ಬಾಧೆ ಹಾಗೂ ಜೂಜಿನ ಚಟದಿಂದ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದ ಕಾರಣ ದರೋಡೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದು, ದರೋಡೆ ಹಣದಲ್ಲಿ ಸಾಲ ತೀರಿಸಿ ಉಳಿದ ಮೊತ್ತದಲ್ಲಿ ಐಷಾರಾಮಿ ಜೀವನ ನಡೆಸುವ ಉದ್ದೇಶ ಹೊಂದಿದ್ದರೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಹಾಲಿ ಸಿಬ್ಬಂದಿಯೇ ಈ ದರೋಡೆ ಸಂಚಿನ ಮಾಸ್ಟರ್ ಮೈಂಡ್ ಎಂದು ದೃಢಪಟ್ಟಿದೆ. ಮುಖ್ಯ ಆರೋಪಿಗಳಾದ ಗೋಪಿ ಮತ್ತು ಕ್ಸೇವಿಯರ್ ಎಟಿಎಂ ನಗದು ಸಾಗಣೆ ಸಿಬ್ಬಂದಿಯಾಗಿದ್ದು, ತಲಾ 17 ಸಾವಿರ ರೂ. ಸಂಬಳ ಪಡೆದಿದ್ದರು. ಕ್ಸೇವಿಯರ್ ಕೆಲಸ ತೊರೆದಿದ್ದರೂ, ಇಬ್ಬರೂ ಜೂಜು ಮತ್ತು ಸಾಲದ ಒತ್ತಡಕ್ಕೆ ಒಳಗಾಗಿದ್ದರು. ಎಟಿಎಂ ವಾಹನದ ಮಾರ್ಗ, ಸಮಯ ಹಾಗೂ ಸುರಕ್ಷತಾ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ದರೋಡೆ ನಡೆಸಲು ಯೋಜಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಮೂವರನ್ನು ಬಂಧಿಸಿರುವ ಪೊಲೀಸರು, ಹೈದರಾಬಾದ್‌ನಿಂದ ಮತ್ತೂ ಮೂವರನ್ನು ಬಂಧಿಸಿ ನಗರಕ್ಕೆ ಕರೆತಂದ್ದಾರೆ. ಇದೇ ವೇಳೆ ಆರೋಪಿ ರವಿಯ ಸಹೋದರ ರಾಕೇಶ್ ತಡರಾತ್ರಿ ಸಿದ್ದಾಪುರ ಠಾಣೆಗೆ ಬಂದು ಶರಣಾಗಿ, ಏಳನೇ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದಾನೆ ಎಂದು ತಿಳಿದು ಬಂದಿದೆ.

ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿವಾಸಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಪಶ್ಚಿಮ ವಿಭಾಗ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಹಾಗೂ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ತನಿಖೆಯ ವಿವರಗಳನ್ನು ಹಂಚಿಕೊಂಡರು. ಘಟನೆ ಭೇದಿಸಿರುವ ನಗರ ಪೊಲೀಸರ ಕಾರ್ಯಕ್ಕೆ ಗೃಹ ಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಟ್ಟು 7.11 ಕೋಟಿಯಲ್ಲಿ 6.29 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ. ಆರೋಪಿಗಳು ಬಳಸಿದ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 1
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 1