ಸಂಭ್ರಮದಿಂದ ಜರುಗಿದ ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ವಾರ್ಷಿಕ ಮಹೋತ್ಸವ
ವಿರಾಜಪೇಟೆ: ಪಟ್ಟಣದ ಐತಿಹಾಸಿಕ ಸಂತ ಅನ್ನಮ್ಮ ಚರ್ಚ್ ವಾರ್ಷಿಕ ಮಹೋತ್ಸವ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವವನ್ನು ಸಂಭ್ರಮದಿಂದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪ್ರತೀ ವರ್ಷದಂತೆ ಈ ವರ್ಷವು ಫೆಬ್ರವರಿ 11ರಂದು ಸಂಜೆ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ಮಹೋತ್ಸವವನ್ನು ಆಚರಿಸಲಾಯಿತು.
ಹಬ್ಬದ ಹಿಂದಿನ ಮೂರು ದಿವಸಗಳ ಕಾಲ ಚರ್ಚ್ ನಲ್ಲಿ ಆಧ್ಯಾತ್ಮಿಕ ಸಿದ್ಧತೆಯು ನಡೆಯಿತು. ಧ್ವಜಾರೋಹಣ, ಜಪಸರ, ಬಲಿಪೂಜೆ ಹಾಗೂ ನವೇನ ಪ್ರಾರ್ಥನೆಯು ಜರುಗಿತು. ಬೆಂಗಳೂರಿನ ರಕ್ಷಕರ ಸಭೆಯ ಗುರುಗಳಾದ ಫಾ. ರಾಬಿನ್ ರವರು ಈ ಮೂರು ದಿವಸಗಳ ಕಾಲ ಪ್ರವಚನವನ್ನು ನೀಡಿದರು. ಬುಧವಾರ ವಾರ್ಷಿಕ ಮಹೋತ್ಸವದ ದಿನದಂದು ಸಂಜೆ ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರವೋ ರವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.
ಹಿಂದೆ ವಿರಾಜಪೇಟೆಯನ್ನು ಆಳಿದ ವೀರರಾಜರು ಸಂತ ಅನ್ನಮ್ಮ ಚರ್ಚ್ ಗೆ ಕೊಡುಗೆಯಾಗಿ ನೀಡಿದ ದೀಪಗಳನ್ನು ಧರ್ಮಾಧ್ಯಕ್ಷರು ಬೆಳಗಿಸುವುದರ ಮೂಲಕ ಧಾರ್ಮಿಕ ಆಚರಣೆಗಳಿಗೆ ಚಾಲನೆಯನ್ನು ನೀಡಲಾಯಿತು. ಬೈಬಲ್ ಪಠಣ, ಪರಮ ಪ್ರಸಾದದ ವಿತರಣೆಯು ಈ ಸಂದರ್ಭದಲ್ಲಿ ನಡೆಯಿತು. ಗಾಯನ ವೃಂಧದವರಿಂದ ದೇವರ ನಾಮಾವಳಿಯ ಸ್ತುತಿಯು ನಡೆಯಿತು. ತದನಂತರ ವಿಶೇಷ ಪ್ರಾರ್ಥನೆಯನ್ನು ಮಾಡಲಾಯಿತು.
ಚರ್ಚ್ ಹಾಗೂ ಒಳ ಆವರಣವನ್ನು ವಾರ್ಷಿಕ ಮಹೋತ್ಸವದ ಪ್ರಯುಕ್ತ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್, ಸಂತ ಅನ್ನಮ್ಮ ಪಿ ಯು ಕಾಲೇಜಿನ ಪ್ರಾಂಶುಪಾಲ ಹಾಗೂ ಅಮ್ಮತ್ತಿ ಚರ್ಚ್ ನ ಗುರುಗಳಾದ ರೆ. ಫಾ. ಮದಲೈ ಮುತ್ತು, ಧರ್ಮಗುರುಗಳಾದ ಫಾ.ಮೈಕಲ್ ಮೆನೇಜಸ್, ಫಾ.ಜಾನ್ ಡಿಕೋನ, ಫಾ.ದಯಾನಂದ ಪ್ರಭು, ಫಾ.ನವೀನ್ ಕುಮಾರ್ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಧರ್ಮಗುರುಗಳು, ಕನ್ಯಾ ಸ್ತ್ರೀಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು.
ಸಂತ ಅನ್ನಮ್ಮ ನವರ ಹಾಗೂ ಲೂರ್ದು ಮಾತೆಯ ತೇರಿನ ಮೆರವಣಿಗೆ: ವಾರ್ಷಿಕ ಮಹೋತ್ಸವದ ಪ್ರಯುಕ್ತವಾಗಿ ಸಂತ ಅನ್ನಮ್ಮನವರ ಹಾಗೂ ಲೂರ್ದು ಮಾತೆಯ ಸ್ವರೂಪಗಳ ತೇರಿನ ಮೆರವಣಿಗೆಯು ವಿರಾಜಪೇಟೆ ನಗರದಲ್ಲಿ ನಡೆಯಿತು. ವಿದ್ಯುತ್ ಹಾಗೂ ಹೂವಿನ ಅಲಂಕೃತ ಮಂಟಪದಲ್ಲಿ ಸಂತ ಅನ್ನಮ್ಮ ಹಾಗೂ ಲೂರ್ದು ಮಾತೆಯವರ ಸ್ವರೂಪಗಳನ್ನು ಪ್ರತಿಷ್ಠಾಪಿಸಿ ಸಂತ ಅನ್ನಮ್ಮ ಚರ್ಚ್ ನಿಂದ ಹೊರಟ ಮೆರವಣಿಗೆಯು ವಿರಾಜಪೇಟೆ ನಗರದ ರಾಜಬೀದಿಗಳಲ್ಲಿ ಸಾಗಿತು.
ಭಕ್ತಾದಿಗಳು ಮೊಂಬತ್ತಿಯನ್ನು ಬೆಳಗಿಸಿ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು, ಚರ್ಚ್ ಪಾಲನಾ ಸಮಿತಿಯವರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ತದನಂತರ ಚರ್ಚ್ ಗೆ ತೆರಳಿ ಪರಮ ಪ್ರಸಾದದ ಆಶೀರ್ವಾದವು ಜರುಗಿತು. ಮಹೋತ್ಸವದ ಪ್ರಯುಕ್ತವಾಗಿ ಲೇಸರ್ ಶೋ, ಸಿಡಿಮದ್ದಿನ ಪ್ರದರ್ಶನ ವು ನಡೆಯಿತು. ತದನಂತರ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾನ ಸೇವೆಯನ್ನು ನೆರವೇರಿಸಲಾಯಿತು.