State News

ಮದುವೆಯ ಮರುದಿನವೇ ಮದುಮಗ ಹೃದಯಾಘಾತದಿಂದ ಮೃತ್ಯು

admincoorgdaily

ಮದುವೆಯ ಮರುದಿನವೇ ಮದುಮಗ ಹೃದಯಾಘಾತದಿಂದ ಮೃತ್ಯು

ಶಿವಮೊಗ್ಗ, ಡಿ 03: ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ಮದುವೆಯ ಮರುದಿನವೇ ಯುವಕ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಮೂಲದ ವರ ಮದುವೆಯ ನಂತರ ವಧುವಿನ ಮನೆಗೆ ಬಂದ ದಿನವೇ ಅಕಸ್ಮಿಕವಾಗಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಭದ್ರಾವತಿ ತಾಲ್ಲೂಕಿನ ಹನುಮಂತಪುರದ ನಿವಾಸಿ ರಮೇಶ್ (30) ಮೃತ ದುರ್ದೈವಿ. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ ಬಳಿಕ ಅವರು ಹೊಸಕೊಪ್ಪದಲ್ಲಿ ತಾಯಿ ಮನೆಯಲ್ಲೇ ವಾಸವಿದ್ದು, ಒಂದು ವರ್ಷದ ಹಿಂದೆ ಬಂಡ್ರಿ ಗ್ರಾಮದ ಮಧುವಿನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನ. 30ರಂದು ಶಿವಮೊಗ್ಗದ ಬಿ.ಹೆಚ್.ರಸ್ತೆಯ ಗಂಗಾ ಪ್ರಿಯಾ ಕಲ್ಯಾಣ ಮಂಟಪದಲ್ಲಿ ವಿವಾಹ ನೆರವೇರಿತ್ತು.

ಮದುವೆಯ ಮರುದಿನವಾದ ಡಿಸೆಂಬರ್ 1ರಂದು, ದಂಪತಿಗಳು ವಧುವಿನ ಮನೆಗೆ ಆಗಮಿಸಿದ್ದರು. ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಸ್ವಾಗತ ನಡೆದಿದ್ದು, ಬಳಿಕ ದಂಪತಿಗಳು ದೇವರ ದರ್ಶನಕ್ಕೆ ತೆರಳಿದಾಗ ಘಟನೆ ಸಂಭವಿಸಿದೆ. ಗರ್ಭಗುಡಿಯ ಬಾಗಿಲಿನತ್ತ ಸಾಗುತ್ತಿದ್ದ ರಮೇಶ್ ಹಠಾತ್ ಅಸ್ವಸ್ಥರಾದರು. ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ, ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ.

ರಮೇಶ್ ಅವರ ಅಂತ್ಯಕ್ರಿಯೆಯನ್ನು ಶಿವಮೊಗ್ಗದ ಹೊಸಕೊಪ್ಪದಲ್ಲಿ ನೆರವೇರಿಸಲಾಗಿದೆ ಎಂದು ತಿಳಿದು ಬಂದಿದೆ.