ಬ್ರೇಕ್ ಫಾಸ್ಟ್ ಮುನ್ನ ಇಬ್ಬರೂ ನಾಯಕರಿಗೆ ಬ್ರೇಕ್ ಫಾಸ್ಟ್ ಮಾಡಿಸಲು ಹೈಕಮಾಂಡ್ ಪೊನ್ನಣ್ಣಗೆ ಕರೆ ಮಾಡಿತ್ತು!

Nov 29, 2025 - 20:24
Nov 29, 2025 - 20:27
 0  728
ಬ್ರೇಕ್ ಫಾಸ್ಟ್ ಮುನ್ನ ಇಬ್ಬರೂ ನಾಯಕರಿಗೆ ಬ್ರೇಕ್ ಫಾಸ್ಟ್ ಮಾಡಿಸಲು ಹೈಕಮಾಂಡ್ ಪೊನ್ನಣ್ಣಗೆ ಕರೆ ಮಾಡಿತ್ತು!

ಬೆಂಗಳೂರು, ನ.29: ಕಾಂಗ್ರೆಸ್‌ ನ ಒಳಗದ್ದಲಕ್ಕೆ ತೆರೆ ಎಳೆದ ಉಪಾಹಾರ ಸಭೆಯ ಹಿಂದಿನ ಕೊಂಡಿಯಾಗಿದ್ದು ಶಾಸಕ ಎ.ಎಸ್. ಪೊನ್ನಣ್ಣ. ಹೈಕಮಾಂಡ್‌ ನಿಂದ ಬಂದ ಮಹತ್ವದ ಫೋನ್ ಕಾಲ್ ಪೊನ್ನಣ್ಣರ ಮೂಲಕವೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿ ಮಾತುಕತೆಗೆ ಕುಳಿತುಕೊಳ್ಳುವ ದಾರಿ ತೆರೆದಿದ್ದು, ಬ್ರೇಕ್‌ಫಾಸ್ಟ್ ಮಾತುಕತೆ ನಡೆಯಿತು.

ಶನಿವಾರ ಬೆಳಿಗ್ಗೆ ಸಿದ್ದರಾಮಯ್ಯರ ಕಾವೇರಿ ನಿವಾಸದಲ್ಲಿ ಇಬ್ಬರು ನಾಯಕರ ಉಪಾಹಾರ ಭೋಜನ ನಡೆದಿದ್ದು, ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ತಂದಿದ್ದ ಆಂತರಿಕ ಸಂಘರ್ಷಕ್ಕೆ ತಾತ್ಕಾಲಿಕ ವಿಶ್ರಾಂತಿ ನೀಡಿದೆ. ಉಪಾಹಾರ ಬಳಿಕ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಹಾಗೂ ಡಿಕೆಶಿ ಪಕ್ಷದ ಒಗ್ಗಟ್ಟು ಮತ್ತು 2028ರ ಚುನಾವಣಾ ತಂತ್ರಗಳ ಬಗ್ಗೆ ಒಂದೇ ಧ್ವನಿಯಲ್ಲಿ ಮಾತನಾಡಿದರು.

ಈ ದಿಢೀರ್ ತಿರುವಿನ ಹಿಂದಿನ ಹಾದಿಯನ್ನು ಸಿಎಂ ಸ್ವತಃ ವಿವರಿಸಿದರು. “ಮೊನ್ನೆಯೇ ಹೈಕಮಾಂಡ್ ಪೊನ್ನಣ್ಣಗೆ ಕರೆ ಮಾಡಿ, ಡಿ.ಕೆ. ಶಿವಕುಮಾರ್‌ ರನ್ನು ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸಲು ಸೂಚಿಸಿತ್ತು. ನಂತರ ಡಿಕೆಶಿಗೂ ನೇರವಾಗಿ ಕರೆ ಮಾಡಲಾಗಿತ್ತು. ಹೈಕಮಾಂಡ್ ಸೂಚನೆಯಂತೆ ನಾವು ಮನೆಯಲ್ಲೇ ಉಪಾಹಾರಕ್ಕೆ ಸೇರಿಕೊಂಡೆವು,” ಎಂದು ಸಿದ್ದರಾಮಯ್ಯ ಹೇಳಿದರು.

ಮಧ್ಯಸ್ಥಿಕೆ ವಹಿಸಿದ್ದಾರಾ ಎಂಬ ಪ್ರಶ್ನೆಗೆ ಪೊನ್ನಣ್ಣ ಸ್ಪಷ್ಟನೆ ನೀಡಿ, “ಯಾವುದೇ ವಿಶೇಷ ಪಾತ್ರವಿಲ್ಲ. ಅವರ ಜೊತೆ ಇದ್ದುದರಿಂದಲೇ ಫೋನ್ ಬಂತು. ಮಾತನಾಡಲು ಕೊಡಲು ಹೇಳಿದ್ದರಿಂದ ಫೋನ್ ಕೊಟ್ಟೆ. ಅದನ್ನು ಮೀರಿ ಬೇರೇನೂ ಇಲ್ಲ,” ಎಂದರು.

ಪ್ರತಿದಿನ ಟ್ವೀಟ್–ಕೌಂಟರ್ ಟ್ವೀಟ್‌ಗಳ ಮೂಲಕ ಬಣ ರಾಜಕೀಯ ವಾತಾವರಣಕ್ಕೆ ಗಟ್ಟಿಬಿದ್ದಿದ್ದ ಕಾಂಗ್ರೆಸ್‌ ಒಳರಾಜಕೀಯಕ್ಕೆ ಹೈಕಮಾಂಡ್ ಒಂದೇ ಫೋನ್ ಕಾಲ್ ಮತ್ತು ಒಂದೇ ಬ್ರೇಕ್‌ಫಾಸ್ಟ್ ಸಭೆಯಿಂದ ಹೊಸ ತಿರುವು ದೊರೆತಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0