ಮಾಟಮಂತ್ರಕ್ಕೆ ಒಪ್ಪದ ಪತ್ನಿಯ ಮುಖಕ್ಕೆ ಕುದಿಯುತ್ತಿದ್ದ ಮೀನಿನ ಸಾಂಬಾರು ಸುರಿದ ಪತಿ!
ಕೊಲ್ಲಂ: ಮಾಟಮಂತ್ರ ಆಚರಣೆಯಲ್ಲಿ ಭಾಗವಹಿಸಲು ಪತ್ನಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಪತಿ, ಆಕೆಯ ಮುಖದ ಮೇಲೆ ಕದಿಯುತ್ತಿದ್ದ ಮೀನಿನ ಸಾಂಬಾರು ಸುರಿದ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಚಾದಯಮಂಗಲಂ ಸಮೀಪದ ವೈಕ್ಕಲ್‌ನಲ್ಲಿ ನಡೆದಿದೆ.
ಈ ದಾಳಿಯಲ್ಲಿ 36 ವರ್ಷದ ರೆಜಿಲಾ ಗಂಭೀರವಾಗಿ ಸುಟ್ಟ ಗಾಯಗಳೊಂದಿಗೆ ಅಂಚಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಪತಿ, ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ 10 ಗಂಟೆ ವೇಳೆಗೆ ದಂಪತಿಯ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಸಜೀರ್ ಕೆಲ ದಿನಗಳ ಹಿಂದೆ ಅಂಚಲ್‌ನಲ್ಲಿರುವ ಮಾಟಮಂತ್ರಗಾರನನ್ನು ಭೇಟಿ ಮಾಡಿ ಮನೆಗೆ ಚಿತಾಭಸ್ಮ ಹಾಗೂ ದಾರವನ್ನು ತಂದಿದ್ದನು. ಬಳಿಕ ಪತ್ನಿಯ ಕೂದಲನ್ನು ಸಡಿಲಗೊಳಿಸಿ, ಚಿತಾಭಸ್ಮ ಹಚ್ಚಲು ಮತ್ತು ಲಾಕೆಟ್ ಕುತ್ತಿಗೆಗೆ ಕಟ್ಟಲು ಹೇಳಿದ್ದಾನೆ. ಪತ್ನಿ ಇದಕ್ಕೆ ನಿರಾಕರಿಸಿದಾಗ, ಅಡುಗೆಮನೆಯಲ್ಲಿದ್ದ ಕುದಿಯುವ ಮೀನಿನ ಸಾಂಬಾರು ತೆಗೆದು ಮುಖದ ಮೇಲೆ ಸುರಿದಿದ್ದಾನೆ ಎನ್ನಲಾಗಿದೆ.
ಆಕೆಯ ಕಿರುಚಾಟ ಕೇಳಿ ನೆರೆಹೊರೆಯವರು ಮನೆಗೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಜೀರ್ ತನ್ನ ಪತ್ನಿಗೆ “ಭೂತ ಹಿಡಿದಿದೆ” ಎಂದು ನಂಬಿಕೊಂಡಿದ್ದ ಮತ್ತು ಹಿಂದೆಯೂ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಆ ಸಂದರ್ಭದಲ್ಲೂ ಪತ್ನಿ ಪೊಲೀಸರಿಗೆ ದೂರು ನೀಡಿದ್ದರೂ, ನಂತರ ಸಜೀರ್‌ಗೆ ಎಚ್ಚರಿಕೆ ನೀಡಿ ಬಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 118(1) (ಅಪಾಯಕಾರಿ ವಿಧಾನಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಪತ್ತೆಗೆ ಶೋಧ ತೀವ್ರಗೊಳಿಸಲಾಗಿದೆ.