ಎಟಿಎಂಗೆ ತುಂಬಲು ಹೋಗುತ್ತಿದ್ದ ಹಣ ದರೋಡೆಯ ಮಾಸ್ಟರ್ ಮೈಂಡ್ ಅಣ್ಣಪ್ಪನೇ ದರೋಡೆ ದಿನ ನಾಕಾಬಂಧಿ ಮಾಡಿದ್ದ! ಖಾಕಿಯೊಳಗೊಬ್ಬ ʼಕಳ್ಳʼ!

Nov 23, 2025 - 21:10
 0  1.3k
ಎಟಿಎಂಗೆ ತುಂಬಲು ಹೋಗುತ್ತಿದ್ದ ಹಣ ದರೋಡೆಯ ಮಾಸ್ಟರ್ ಮೈಂಡ್ ಅಣ್ಣಪ್ಪನೇ ದರೋಡೆ ದಿನ ನಾಕಾಬಂಧಿ ಮಾಡಿದ್ದ!  ಖಾಕಿಯೊಳಗೊಬ್ಬ ʼಕಳ್ಳʼ!
Photo credit: Asaint news

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ ಎಟಿಎಂ ದರೋಡೆ ಪ್ರಕರಣದಲ್ಲಿ ಬಂಧಿತನಾದ ಗೋವಿಂದಪುರ ಠಾಣೆಯ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್, ಘಟನೆ ನಡೆದ ಕೆಲವೇ ಗಂಟೆಗಳ ನಂತರ ರಾತ್ರಿ ಪಾಳಿಗೆ ಹಾಜರಾಗಿ ನಾಕಾಬಂದಿಯಲ್ಲಿ ವಾಹನ ತಪಾಸಣೆ ನಡೆಸಿದ್ದ ವಿಚಾರ ಬೆಳಕಿಗೆ ಬಂದಿದೆ. ದರೋಡೆ ಬಳಿಕವೂ ಕರ್ತವ್ಯದಲ್ಲಿ ನಿರ್ಲಿಪ್ತವಾಗಿ ಆತ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. 

2018ರಲ್ಲಿ ಹಾವೇರಿ ಜಿಲ್ಲೆಯ ಹಳೆಯ ವೀರಾಪುರದಿಂದ ಪೊಲೀಸ್ ಇಲಾಖೆಗೆ ಸೇರಿದ್ದ ಅಣ್ಣಪ್ಪ, ಮೊದಲು ಬಾಣಸವಾಡಿ ಠಾಣೆಯಲ್ಲಿ ಸೇವೆ ಸಲ್ಲಿಸಿ, ಒಂದೂವರೆ ವರ್ಷಗಳಿಂದ ಗೋವಿಂದಪುರ ಠಾಣೆಗೆ ವರ್ಗಾವಣೆಯಾಗಿದ್ದ. ಸೇವಾ ದಾಖಲೆ ಉತ್ತಮವಾಗಿರದೇ, ಹಲವಾರು ಬಾರಿ ಕರ್ತವ್ಯಲೋಪದ ಆರೋಪ ಎದುರಿಸಿದ್ದ ಕಾರಣದಿಂದ ಆತನಿಗೆ ಬಂದೋಬಸ್ತ್ ಕರ್ತವ್ಯ ಹೊರತುಪಡಿಸಿ ಇತರೆ ಜವಾಬ್ದಾರಿಗಳನ್ನು ನೀಡಲಾಗುತ್ತಿರಲಿಲ್ಲವೆಂದು ಪೊಲೀಸ್ ವಲಯದ ಮೂಲಗಳು ತಿಳಿಸಿವೆ.

ದರೋಡೆ ನಡೆದ ರಾತ್ರಿ ಅಣ್ಣಪ್ಪನಿಗೆ ವಾಹನ ತಪಾಸಣೆ ಜವಾಬ್ದಾರಿ ನೀಡಲಾಗಿತ್ತು. ದರೋಡೆಯ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬನಾಗಿದ್ದರೂ, ಅಣ್ಣಪ್ಪ ಯಾವುದೇ ಆತಂಕ ತೋರಿಸದೇ ಮುಂಜಾನೆವರೆಗೂ ನಾಕಾಬಂದಿಯಲ್ಲಿ ಕಾರ್ಯನಿರ್ವಹಿಸಿದ್ದಾನೆ ಎಂದು ತಿಳಿದು ಬಂದಿದೆ.  

 ಕೆಲ ದಿನಗಳ ಹಿಂದೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬಂದೋಬಸ್ತ್ ವೇಳೆ ಅಣ್ಣಪ್ಪ ಇತರ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಆತನ ಹಿನ್ನೆಲೆ ಪ್ರಶ್ನಾರ್ಹವಾಗಿರುವುದರಿಂದ ಮುಖ್ಯಮಂತ್ರಿ ನಿವಾಸ ಭದ್ರತೆಗೆ ನಿಯೋಜಿಸಲಾಗಿರಲಿಲ್ಲವೆಂದು ಮೂಲಗಳು ಸ್ಪಷ್ಟಪಡಿಸಿವೆ.

 “ಅಪರಾಧದಲ್ಲಿ ಪೊಲೀಸರ ಪಾತ್ರ ಯಾವುದೇ ಪರಿಸ್ಥಿತಿಯಲ್ಲೂ ಅಂಗೀಕಾರಾರ್ಹವಲ್ಲ. ಅಣ್ಣಪ್ಪನನ್ನು ಸೇವೆಯಿಂದಲೇ ವಜಾಗೊಳಿಸುವ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಯುತ್ತಿದೆ,” ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

 ಅಣ್ಣಪ್ಪನ ನಡವಳಿಕೆಯಿಂದ ಪತ್ನಿ ಬೇಸತ್ತು ತವರು ಸೇರಿರುವ ಮಾಹಿತಿ ಲಭ್ಯವಾಗಿದೆ. ಬಾಣಸವಾಡಿ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಸಮಯದಲ್ಲಿ ಗಾಂಜಾ ಮಾರಾಟಗಾರರಿಗೆ ನೆರವಾದ ಆರೋಪವೂ ಆತನ ವಿರುದ್ಧ ಕೇಳಿ ಬಂದತ್ತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0