ಮಾರ್ಚ್ 15ರಂದು ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನ ಉದ್ಘಾಟನೆ
ಮಡಿಕೇರಿ ಮಾ.11 : ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಮಾ.15ರಂದು ನಡೆಯಲಿದೆ ಎಂದು ಚೇರಳ ಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ತಿಳಿಸಿದರು.
ದಾನಿಗಳು, ಸಮಾಜದ ಬಾಂಧವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನ ಸಮುದಾಯ ಭವನವನ್ನು ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ.
ನೂತನ ಸಮುದಾಯ ಭವನವನ್ನು ಬೆಳಿಗ್ಗೆ ೧೦ ಗಂಟೆಗೆ ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಅವರು ಉದ್ಘಾಟಿಸಲಿದ್ದಾರೆ. ಚೇರಳ ಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ಸಿ.ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಾಜಿ ಸಚಿವ ಮಂಡೇಪಂಡ ಪಿ.ಅಪ್ಪಚ್ಚುರಂಜನ್, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಪಿ.ಸುನಿಲ್ ಸುಬ್ರಮಣಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಉಪಾಧ್ಯಕ್ಷ ಡಾ.ತೇನನ ರಾಜೇಶ್, ಕೊಡಗು ಗೌಡ ಸಮಾಜದ ಅಧ್ಯಕ್ಷ ದಂಬೆಕೋಡಿ ಆನಂದ, ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ, ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಸಮಾಜ ಸೇವಕರು ಹಾಗೂ ಬೆಳೆಗಾರ ನಾಪಂಡ ಮುತ್ತಪ್ಪ, ಉದ್ಯಮಿ ಸುಳ್ಯಕೋಡಿ ಪ್ರದೀಪ್ ಕುಮಾರ್ ಹಾಗೂ ಕಾಫಿ ಬೆಳೆಗಾರ ಮರದಾಳು ಬಸಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.
೧.೭೫ ಕೋಟಿ ರೂ. ವೆಚ್ಚದ ಕಟ್ಟಡ: ೨೦೨೫ ಜೂನ್ ತಿಂಗಳಿನಲ್ಲಿ ೧.೨೫ ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ತಲೆ ಎತ್ತಿತ್ತು. ಆದರೆ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ೫೦ ಲಕ್ಷ ರೂಪಾಯಿಗಳು ಬೇಕಾಯಿತು. ಈ ಕೊರತೆಯನ್ನು ತುಂಬಲು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರಲ್ಲಿ ಮನವಿ ಮಾಡಲಾಯಿತು.
ಸಮುದಾಯ ಭವನದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸಹಕಾರ ನೀಡುವುದಾಗಿ ಗೌಡ ಸಮಾಜಗಳ ಒಕ್ಕೂಟ ಭರವಸೆ ನೀಡಿತು. ಅದರಂತೆ ಸುಮಾರು ೨೦ ಲಕ್ಷ ರೂ. ಗಳನ್ನು ದಾನಿಗಳಿಂದ ಸಂಗ್ರಹಿಸಿ ಒಕ್ಕೂಟ ನೀಡಿತು. ಉಳಿದ ಹಣವನ್ನು ಚೇರಳ ಗೌಡ ಸಮಾಜದ ಸದಸ್ಯರು ಮನೆ ಮನೆಗೆ ತೆರಳಿ ಸಂಗ್ರಹಿಸಿದರು. ಸಮಾಜ ನಿನಗೇನು ನೀಡಿದೆ ಎಂದು ಕೇಳುವ ಬದಲು ಸಮಾಜಕ್ಕಾಗಿ ನೀನೇನು ಮಾಡಿದೆ’ ಎಂಬ ಆದರ್ಶದೊಂದಿಗೆ ಕಾರ್ಯೋನ್ಮುಖವಾದ ಚೇರಳ ಗೌಡ ಸಮಾಜ ಪ್ರಸ್ತುತ ಭವ್ಯ ಕಟ್ಟಡವನ್ನು ನಿರ್ಮಿಸಿ ಪೂರ್ಣಗೊಳಿಸಿದೆ ಎಂದು ಅಯ್ಯಂಡ್ರ ರಾಘವಯ್ಯ ವಿವರಿಸಿದರು.
ಸಹ ಖಜಾಂಚಿ ಪೇರಿಯನ ಉದಯ ಕುಮಾರ್ ಮಾತನಾಡಿ ಸುಮಾರು ೧೭ ವರ್ಷಗಳ ಸತತ ಪ್ರಯತ್ನದ ನಂತರ ನೂತನ ಭವ್ಯವಾದ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳುತ್ತಿದೆ. ಉದ್ಘಾಟನಾ ಸಮಾರಂಭಕ್ಕೆ ಕೊಡಗು, ಪಿರಿಯಾಪಟ್ಟಣ, ಹುಣುಸೂರು, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಗೌಡ ಸಮಾಜಗಳ ಬಾಂಧವರು ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೊಸಮನೆ ಪೂವಯ್ಯ, ಉಪ ಕಾರ್ಯದರ್ಶಿ ನೂಜಿಬೈಲು ನಾಣಯ್ಯ, ನಿರ್ದೇಶಕರಾದ ಕಲ್ಪಡ ಶೋಭ ಹಾಗೂ ನೂಜಿಬೈಲು ಅರುಣಾಕ್ಷಿ ಉಪಸ್ಥಿತರಿದ್ದರು.