ಸೈಬರ್ ಅಪರಾಧಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ;ಡಿವೈಎಸ್.ಪಿ ಮಹೇಶ್ ಕುಮಾರ್

Jan 30, 2026 - 17:44
 0  206
ಸೈಬರ್ ಅಪರಾಧಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ;ಡಿವೈಎಸ್.ಪಿ ಮಹೇಶ್ ಕುಮಾರ್

ವಿರಾಜಪೇಟೆ:ಪ್ರತಿದಿನ ಹಲವಾರು ಹೊಸ ಸೈಬರ್ ಕ್ರೈಮ್ ಪ್ರಕರಣಗಳು ಮತ್ತು ವಂಚನೆಗಳು ಬೆಳಕಿಗೆ ಬರುತ್ತಿರುವುದು ಆಘಾತಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದ್ದು, ಸೈಬರ್ ಅಪರಾಧಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿರಾಜಪೇಟೆ ಪೋಲಿಸ್ ಉಪ ಅಧೀಕ್ಷಕರಾದ ಮಹೇಶ್ ಕುಮಾರ್ ಹೇಳಿದರು.

ವಿರಾಜಪೇಟೆ ಮಾಜಿ ಸೈನಿಕರ ಸಂಘದ ಮಾಸಿಕ ಸಭೆಯು ಇತ್ತಿಚೆಗೆ ಸಂಘದ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾಜಿ ಸೈನಿಕರಿಗೆ ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಲು ಅವರು ಸಭೆಗೆ ಆಗಮಿಸಿ ಜಾಗೃತಿ ಮೂಡಿಸಿ ಮಾತನಾಡಿದ ಪೋಲಿಸ್ ಉಪ ಅಧೀಕ್ಷಕರಾದ ಮಹೇಶ್ ಕುಮಾರ್ ಅವರು,

ಸೈಬರ್ ಕ್ರೈಮ್ ಬಗ್ಗೆ ಜನರು ಜಾಗೃತರಾಗಿರಬೇಕು ಮತ್ತು ಪ್ರತಿಯೊಂದು ಸಾಫ್ಟ್ವೇರ್ ಅನ್ನು ಡೌನ್‌ಲೋಡ್ ಮಾಡಬಾರದು. ಹೆಚ್ಚು ತಾಂತ್ರಿಕ ಜ್ಞಾನ ಬಳಕೆ ಮಾಡುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಹಿರಿಯ ನಾಗರಿಕರು ಸೈಬರ್ ವಂಚನೆಗೆ ಹೆಚ್ಚು ಗುರಿಯಾಗುತ್ತಿದ್ದಾರೆಂದು ತಿಳಿಸಿದರು. ವಂಚನೆಗಳನ್ನು ಪತ್ತೆ ಹಚ್ಚುವುದು ಹಾಗೂ ಅವುಗಳಿಗೆ ಪರಿಹಾರ ಕಂಡುಹಿಡಿಯಲು ಸೇತುವೆಯಾಗುವುದರತ್ತ ನಾವು ಕೆಲಸ ಮಾಡುತ್ತಿದ್ದೇವೆ. ಆನ್‌ಲೈನ್ ವಂಚನೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಮಾಜದ ಮನೆ ಮನೆಗೂ ತಲುಪುವಂತಾಗುವ ದಿಸೆಯಲ್ಲಿ ಪೊಲೀಸ್ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರಲ್ಲದೆ ಮೊಬೈಲ್ ಪ್ರಜ್ಞಾಪೂರ್ವಕವಾಗಿ ಬಳಸಬೇಕು, ಅಪರಿಚಿತರ ಕೈಗೆ ಮೊಬೈಲ್ ನೀಡಬಾರದು, ಅಪರಿಚಿತ ಪೋನ್ ಮತ್ತು ವಿಡಿಯೋ ಕರೆಗಳನ್ನು ಸ್ವೀಕರಿಸಬೇಡಿ, ಓ.ಟಿ.ಪಿ. ಸಂಖ್ಯೆಗಳನ್ನು ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ತಿಳಿಸಬೇಡಿ, ಮುಖ್ಯವಾಗಿ ಹೆಣ್ಣು ಮಕ್ಕಳು ಮೊಬೈಲ್ ಕುರಿತು ಬಹಳ ಎಚ್ಚರಿಕೆಯಿಂದ ಬಳಸಬೇಕು.

ಇಲ್ಲವಾದಲ್ಲಿ ಅನೇಕ ತೊಂದರೆಗಳಿಗೆ ಸಿಲುಕುವಿರಿ ಎಂದರು. ವಾಟ್ಸ್ಆಪ್, ಇನ್ಸಾಟ್ರಗ್ರಾಮ್, ಫೇಸ್ ಬುಕ್, ಟ್ವೇಟರ್, ಮುಂತಾದುವುಗಳ ಮೂಲಕ ಅಪರಿಚಿತರು ಪರಿಚಯ ಮಾಡಿಕೊಂಡು ನಿಮ್ಮನ್ನು ದರ‍್ಬಳಿಸಿಕೊಂಡು ಅನಾಹುತಗಳಿಗೆ ಕಾರಣರಾಗುತ್ತಾರೆ ಎಂದು ಕಿವಿಮಾತು ತಿಳಿಸಿದರು. ಅಪರಿಚಿತ ಕರೆಗಳು ಸ್ವೀಕರಿಸಬೇಡಿ, ಸೇವ್ ಮಾಡಬೇಡಿ, ಮೇಸೇಜ್‌ಗಳಿಗೆ ರಿಪ್ಲೇ ಮಾಡಬೇಡಿ, ನಿಮ್ಮ ಪರಿಚಿತರ ಸಂಖ್ಯೆಗಳನ್ನು ಮಾತ್ರ ಸೇವ್ ಮಾಡಿ ಕರೆಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿಕೊಳ್ಳಿ, ವಿಡಿಯೋ ಕಾಲ್ಸ್ಗಳ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ, ಏನಾದರೂ ಅನುಚಿತ ಕರೆಗಳು, ವಿಡಿಯೋಗಳು, ಬೆದರಿಕೆ, ಹೂಡಿಕೆಗೆ ಆಮಿಷಗಳನ್ನು ಒಡ್ಡುವುದು ಇತ್ಯಾದಿಗಳ ಕುರಿತು ದೂರು ನೀಡಿ ಎಂದು ತಿಳಿಸಿದರು.

ವಂಚಕರು ಅಂತರ್ಜಾಲದ ಸಂಪರ್ಕ ಪಡೆದು ಇತರರಿಗೆ ಕಂಪ್ಯೂಟರ್ ಸಂಪರ್ಕವನ್ನು ನಿರ್ಬಂಧಿಸುವುದು. ವೈರಸ್ ಹರಡಿ ಇಡೀ ಸಂಪರ್ಕವನ್ನು ನಾಶಪಡಿಸುವುದು, ದುರುದ್ದೇಶವುಳ್ಳ ತಂತ್ರಾಂಶವನ್ನು ಬಳಸಿ ಇನ್ನೊಬ್ಬರ ಕ್ರೆಡಿಟ್ ಕಾರ್ಡ್, ಬ್ಯಾಂಕ್ ಕಾರ್ಡ್ಗಳನ್ನು ನಕಲಿ ಮಾಡುವುದು, ಇನ್ನೊಬ್ಬರ ಬಗ್ಗೆ ತಪ್ಪು ಭಾವನೆ ಬರುವಂತೆ ಮಾಡುವುದು. ಬೆದರಿಕೆ ಮೂಲಕ ಭಯೋತ್ಪಾದನೆ ಉಂಟು ಮಾಡುವುದು ಆನ್‌ಲೈನ್ ವಂಚಕರ ಕೆಲಸವಾಗಿದೆ.

ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವುದಾಗಿ, ಲಾಟರಿ ಬಂದಿರುವುದಾಗಿ, ಕೆಲಸ ಕೊಡಿಸುವುದಾಗಿ, ಉಡುಗೊರೆ ಕೊಡುವುದಾಗಿ, ಕಡಿಮೆ ಬೆಲೆಯಲ್ಲಿ ದುಬಾರಿ ವಸ್ತುಗಳನ್ನು ಮಾರುತ್ತೇವೆ ಎಂಬುದಾಗಿ ನಿಮಗೆ ಮೊಬೈಲ್ ಕರೆ ಅಥವಾ ಇ-ಮೇಲ್ ಮಾಡಿದರೆ ಅದನ್ನು ನಂಬಬೇಡಿ. ಇದರಿಂದ ನಿಮ್ಮ ಹಣ ಪಾವತಿಮಾಡುವಂತೆ ಹೇಳಿ ನಂಬಿಸಿ ವಂಚಿಸುತ್ತಾರೆ. ಈ ಬಗ್ಗೆ ಎಚ್ಚರವಿರಲಿ ಹೀಗೆ ಸಮಾಜದಲ್ಲಿ ನಡೆಯುವ ಸೈಬರ್ ಕ್ರೈಮ್ ನ ಬಗ್ಗೆ ಮಾಹಿತಿ ನೀಡಿ, ಪ್ರತ್ಯೇಕವಾಗಿ ಹಿರಿಯ ನಾಗರಿಕರು ಪಿಂಚಣಿದಾರರನ್ನು ಕಲೆ ಹಾಕಿ ಮೋಸ ಮಾಡುವುದರ ಕುರಿತು ಹಾಗೂ ಡಿಜಿಟಲ್ ಬಂಧನದ ಕುರಿತು ಜಾಗೃತಿ ಮೂಡಿಸಿದರು.

ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಮಾತನಾಡಿ ಭಾರತೀಯ ಸೇನೆಯು ಸದಾ ತಾಯಿನಾಡಿನ ಶಾಂತಿಗಾಗಿ ಸರಕಾರ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸೇವೆ ಮಾಡುವುದರ ಬಗ್ಗೆ ಮನವರಿಕೆ ಮಾಡಿದರು. ಸಂಘದ ಸದಸ್ಯರು ಹಾಗೂ ಮಾಜಿ ಸೈನಿಕರಾದ ದಿವಂಗತ ಮಾಚಿಮಂಡ ಜಿ ಸೋಮಯ್ಯ ಅವರಿಗೆ ಸಂತಾಪ ಸೂಚಿಸಲಾಯಿತು.

ಈ ಸಂದರ್ಭ ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರುವಂಡ ಕೆ ನಾಚಪ್ಪ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಬಿ.ಎಸ್., ಕಾರ್ಯದರ್ಶಿ ಪುಗ್ಗೇರ ಎಸ್ ನಂದಾ, ಖಜಾಂಚಿ ತೋರೇರ ಪೂವಯ್ಯ, ನಿರ್ದೆಶಕರಾದ ಚೇಂದ್ರಿಮಾಡ ಕೆ. ನಂಜಪ್ಪ, ಪಟ್ರಪಂಡ ಎಂ. ಕರುಂಬಯ್ಯ, ಕೊಂಗಂಡ ಎ. ಭೀಮಯ್ಯ, ಅಣ್ಣಾಳಮಾಡ ಡಿ. ಸುಬ್ಬಯ್ಯ, ಬಾಳೆಕುಟ್ಟೀರ ಎ. ಬೋಪಯ್ಯ, ಅಪ್ಪಯ್ಯ ಹೆಚ್.ಕೆ., ಕಬ್ಬಚ್ಚೀರ ಕೆ. ಬೋಪಣ್ಣ, ಎಂ.ಕೆ. ಸಲಾಂ ಕಡಂಗ, ಪಟ್ರಪಂಡ ಎನ್. ಚಂಗಪ್ಪ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0