ವಿರಾಜಪೇಟೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮುಕಿ ಕೋಲಾಹಲ

ವಿರಾಜಪೇಟೆ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಇಂದು ಮತ್ತೆ ಪುನಃ ಕೋಲಹಾಲಕ್ಕೆ ಕಾರಣವಾದ ಘಟನೆ ನಡೆದಿದೆ. ಈ ಹಿಂದೆ ಪೀಟೋಪಕರಣ ಖರೀದಿಯಲ್ಲಿ ನಡೆದ ದುರುಪಯೋಗದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ನಂತರ ಸಮಗ್ರ ತನಿಖೆಗೆ ಒಳಪಡಿಸಲಾಗಿತ್ತು.ತನಿಖೆ ವರದಿ ಬಂದಿದ್ದು ಅದನ್ನು ಚರ್ಚೆಗೆ ಒಳಪಡಿಸಲು ಈ ಹಿಂದೆ ಸದಸ್ಯರು ಆಗ್ರಹಿಸಿದ್ದರು ಚರ್ಚೆಗೆ ಇದುವರೆಗೆ ಬರಲಿಲ್ಲ.

ಇಂದು ಕೂಡ ಪೀಠೋಪಕರಣ ಹಗರಣದ ಚರ್ಚೆಯನ್ನು ವಿರಾಜಪೇಟೆಯ ಕಾಂಗ್ರೆಸ್ ಪಕ್ಷದ ಹಿರಿಯ ಪುರಸಭೆಯ ಸದಸ್ಯರಾದ ಸಿ.ಕೆ ಪೃಥ್ವಿನಾಥ ಅವರು ಚರ್ಚೆಗೆ ಅವಕಾಶವನ್ನು ಕೇಳಿದಾಗ ಅದನ್ನು ಮುಖ್ಯ ಅಧಿಕಾರಿಗಳಾದ ನಾಚಪ್ಪ ಹಾಗೂ ಅಧ್ಯಕ್ಷರಾದ ಶ್ರೀಮತಿ ದೇಚಮ್ಮ ನಿರಾಕರಿಸಿದರಿಂದ ಅಧ್ಯಕ್ಷರ ಸರ್ವಾಧಿಕಾರ ಧೋರಣೆಗೆ ಧಿಕ್ಕಾರ ಎಂದು ಹಿರಿಯ ಸದಸ್ಯ ಪೃಥ್ವಿ ನಾಥ್ ಸಭೆಯಲ್ಲಿ ಕೂಗಾಡುತ್ತಿದ್ದಾಗ, ಸಭೆಯಲ್ಲಿದ್ದ ಸದಸ್ಯರಾದ ಮತಿನ್, ರಾಜೇಶ್ ಪದ್ಮನಾಭ, ಮೊಹಮದ್ ರಫಿ ಅವರು ಪೃಥ್ವಿ ನಾಥ್ ವಿರುದ್ಧ ತಿರುಗಿ ಬಿದ್ದರು.

 ಮಾತಿಗೆ ಮಾತು ಬೆಳೆದು, ಸಭೆಯಿಂದ ಹೊರಗೆ ಬಾ ನೋಡಿಕೊಳ್ಳುತ್ತೇನೆ ಎಂದು ರಾಜೇಶ್ ಪದ್ಮನಾಭ, ಮೊಹಮದ್ ರಫಿ ಸಭೆಯಿಂದ ಎದ್ದು ಪೃಥ್ವಿನಾಥ್ ರವರನ್ನು ಹೊರಗೆ ಬಾ ಎಂದು ಹೇಳಿದಾಗ ಮತ್ತಷ್ಟು ಗೊಂದಲ ಸಭೆಯಲ್ಲಿ ಏರ್ಪಟ್ಟಿತು. ಸಭೆಯಲ್ಲಿದ್ದ ಸದಸ್ಯರಾದ ಶಬರೀಶ್, ಶ್ರೀಮತಿ ಜುನಾ ಒಂದು ಹಂತದಲ್ಲಿ ಇವರನ್ನು ಸಮಾಧಾನಿಸಲು ಪ್ರಯತ್ನಿಸಿದರು ನಂತರ ಅಧ್ಯಕ್ಷರು ಪೊಲೀಸರಿಗೆ ಸುದ್ದಿ ಮುಟ್ಟಿಸಿ, ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಭೆಯಲ್ಲಿ ಪುರಸಭಾ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ರವರು ಉಪಸ್ಥಿತರಿದ್ದರು ಆಡಳಿತ ಪಕ್ಷದ ಸದಸ್ಯರ ಈ ವರ್ತನೆಗಳನ್ನು ಮೂಕ ಪ್ರೇಕ್ಷಕರಾಗಿ ನೋಡಿಕೊಂಡು ತಮ್ಮ ಘನತೆಯ ಬಗ್ಗೆ ಎಚ್ಚರ ವಹಿಸಿ ಜಾಣ್ಮೆಯ ನಡೆ ಪ್ರದರ್ಶಿಸಿದರು. ಒಟ್ಟಿನಲ್ಲಿ ಇಂದಿನ ಸಭೆಯಲ್ಲಿ ಅಭಿವೃದ್ಧಿಪರ ಚರ್ಚೆ ಗಿಂತ, ಅವ್ಯವಹಾರ ದುರುಪಯೋಗದ ಬಗ್ಗೆ ಆಡಳಿತ ಪಕ್ಷದ ಸದಸ್ಯರ ಒಳಗೆ ಚರ್ಚೆ ಏರ್ಪಟ್ಟು ಸಭೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿತು.