ಮೂರು ತಿಂಗಳ ಹಿಂದೆ ಜೈಲಿನಿಂದ ಹೊರಬಂದು ಮತ್ತೆ ಅದೇ ಬುದ್ಧಿ; ಮಹಿಳೆಯ ಬೆರಳು ಕತ್ತರಿಸಿದ ಸರಗಳ್ಳರು ಅಂದರ್

ಮೂರು ತಿಂಗಳ ಹಿಂದೆ ಜೈಲಿನಿಂದ ಹೊರಬಂದು ಮತ್ತೆ ಅದೇ ಬುದ್ಧಿ; ಮಹಿಳೆಯ ಬೆರಳು ಕತ್ತರಿಸಿದ ಸರಗಳ್ಳರು ಅಂದರ್
Photo credit: Etv bharath

ಬೆಂಗಳೂರು: ನಗರದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಚ್ಚು ತೋರಿಸಿ ಮಹಿಳೆಯ ಮೇಲೆ ದಾಳಿ ನಡೆಸಿ ಚಿನ್ನಾಭರಣ ದೋಚಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರನ್ನು ಯೋಗಾನಂದ (35) ಹಾಗೂ ಅವನ ಸಹಚರ ಪ್ರವೀಣ್ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 80 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 13ರಂದು ಗಣೇಶ ಹಬ್ಬದ ಸಂದರ್ಭದಲ್ಲಿ ಆರ್ಕೆಸ್ಟ್ರಾ ವೀಕ್ಷಿಸಿ ಮನೆಗೆ ಮರಳುತ್ತಿದ್ದ ಉಷಾ ಹಾಗೂ ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರ ಮೇಲೆ ಪಲ್ಸರ್ ಬೈಕ್‌ನಲ್ಲಿ ಬಂದ ಸರಗಳ್ಳರು ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನದ ಸರ ಕಸಿದುಕೊಂಡಿದ್ದರು. ಉಷಾ ಭಯದಿಂದ ಸರ ನೀಡಿದರೆ, ಪ್ರತಿರೋಧ ತೋರಿದ ವರಲಕ್ಷ್ಮಿ ಅವರ ಕೈ ಬೆರಳು ಮಚ್ಚಿನ ದಾಳಿಯಿಂದ ಕತ್ತರಿಸಿತ್ತು.

ಅದೇ ದಿನ ಕುಮಾರಸ್ವಾಮಿ ಲೇಔಟ್ ಹಾಗೂ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಇದೇ ರೀತಿ ಸರಗಳ್ಳತನ ಪ್ರಕರಣಗಳನ್ನು ಆರೋಪಿಗಳು ಎಸಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮುಖ್ಯ ಆರೋಪಿ ಯೋಗಾನಂದ ನಗರದ ಗೊಲ್ಲರಹಳ್ಳಿ ನಿವಾಸಿ ಮತ್ತು ಮೂಲತಃ ಮದ್ದೂರಿನ ಮಾರಸಿಂಗಹಳ್ಳಿಯವನು. 2010ರಿಂದ ಕೊಲೆ, ದರೋಡೆ, ಸರಗಳ್ಳತನ ಸೇರಿದಂತೆ 25ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಹಲವು ಬಾರಿ ಜೈಲುಪಾಲಾಗಿದ್ದಾನೆ. ಇತ್ತೀಚಿಗೆ ಮೂರು ತಿಂಗಳ ಹಿಂದೆ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮತ್ತೆ ಸರಗಳ್ಳತನ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಚಿನ್ನಾಭರಣ ಮಾರಾಟದಿಂದ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಯೋಗಾನಂದ, ಸೆ.13ರ ಕೃತ್ಯ ಬಳಿಕ ಗೋವಾ, ಪಾಂಡಿಚೇರಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಡಗಿ ಓಡಾಡುತ್ತಿದ್ದ. ಬಳಿಕ ಹಣ ಎಲ್ಲಾ ಖಾಲಿ ಮಾಡಿ ವಾಪಸ್ ಊರಿಗೆ ಬಂದ ಎನ್ನಲಾಗಿದೆ. ಊರಿಗೆ ವಾಪಸ್ಸಾದಾಗ ಗಿರಿನಗರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

“ಸೆಪ್ಟೆಂಬರ್ 13ರಂದು ಗಿರಿನಗರ, ಕುಮಾರಸ್ವಾಮಿ ಲೇಔಟ್ ಹಾಗೂ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಕೃತ್ಯ ಎಸಗಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ವಿರುದ್ಧ ಬಿಎನ್‌ಎಸ್ 111ರಡಿ ಸಂಘಟಿತ ಅಪರಾಧದಡಿ ಪ್ರಕರಣ ದಾಖಲಾಗಿದೆ,” ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಹೇಳಿದ್ದಾರೆ.