ಗಸ್ತು ವೇಳೆ ಹುಲಿ ದಾಳಿ | ಅರಣ್ಯ ಇಲಾಖೆಯ ವಾಚರ್‌ ಬಲಿ

Dec 27, 2025 - 21:46
 0  1.8k
ಗಸ್ತು ವೇಳೆ ಹುಲಿ ದಾಳಿ | ಅರಣ್ಯ ಇಲಾಖೆಯ ವಾಚರ್‌ ಬಲಿ
Photo credit: TV09

ಚಾಮರಾಜನಗರ, ಡಿ. 27: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮರಳಹಳ್ಳಿ ವ್ಯಾಪ್ತಿಯಲ್ಲಿ ಗಸ್ತು ಕಾರ್ಯಕ್ಕೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹುಲಿ ದಾಳಿಗೆ ಬಲಿಯಾದ ಘಟನೆ ಶನಿವಾರ ಸಂಭವಿಸಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮರಳಹಳ್ಳಿ ಕಳ್ಳಬೇಟೆ ತಡೆ ಶಿಬಿರದಲ್ಲಿ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಣ್ಣ ಹೈದ (56) ಮೃತಪಟ್ಟಿದ್ದಾರೆ.

ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಸಣ್ಣ ಹೈದ ಅವರು ತಮ್ಮ ಶಿಬಿರದ ನಾಲ್ವರು ಸಿಬ್ಬಂದಿಯೊಂದಿಗೆ ಮಧ್ಯಾಹ್ನ ನಿಯಮಿತ ಬೀಟ್ ಕಾರ್ಯಕ್ಕೆ ತೆರಳಿದ್ದರು. ಈ ವೇಳೆ ಹುಲ್ಲು ಬೀಜ ಸಂಗ್ರಹಿಸುವಾಗ ಅರಣ್ಯ ಭಾಗದಿಂದ ಏಕಾಏಕಿ ಬಂದ ಹುಲಿಯೊಂದು ಅವರ ಮೇಲೆ ದಾಳಿ ನಡೆಸಿದೆ. ಜೊತೆಯಲ್ಲಿದ್ದ ಸಿಬ್ಬಂದಿ ಕೂಗಿ ಪ್ರತಿಕ್ರಿಯಿಸಿದ ಪರಿಣಾಮ ಹುಲಿ ಸ್ಥಳದಿಂದ ಪರಾರಿಯಾದರೂ, ಗಂಭೀರ ಗಾಯಗೊಂಡ ಸಣ್ಣ ಹೈದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ಮಾಹಿತಿ ಪಡೆದ ತಕ್ಷಣ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಿಎಫ್‌ ಪ್ರಭಾಕರನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿಗಳ ಚಲನವಲನ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಗುಂಡ್ಲುಪೇಟೆ ಹಾಗೂ ಹನೂರು ತಾಲ್ಲೂಕುಗಳಲ್ಲಿಯೂ ಹುಲಿಗಳ ಓಡಾಟ ವರದಿಯಾಗಿದ್ದು, ಸಾರ್ವಜನಿಕರ ಜೊತೆಗೆ ಅರಣ್ಯ ಸಿಬ್ಬಂದಿಯ ಸುರಕ್ಷತೆ ಕುರಿತ ಚರ್ಚೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣಾ ಕ್ರಮಗಳನ್ನು ಒದಗಿಸುವ ಅಗತ್ಯವಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 0