ಮೈಸೂರಿನಲ್ಲಿ ನಡೆದ ಹಗ್ಗ-ಜಗ್ಗಾಟ ಸ್ಪರ್ಧೆ ಅಭೂತಪೂರ್ವ ಯಶಸ್ಸು: ಎಲ್ಲರೂ ಕ್ರೀಡೆಯಲ್ಲಿ ಭಾಗಿಯಾಗಿ ಆರೋಗ್ಯ ಕಾಪಾಡಿಕೊಳ್ಳಿ: ಸಂಸದ ಯದುವೀರ್‌ ಒಡೆಯರ್‌ ಕರೆ

Dec 1, 2025 - 09:54
 0  215
ಮೈಸೂರಿನಲ್ಲಿ ನಡೆದ ಹಗ್ಗ-ಜಗ್ಗಾಟ ಸ್ಪರ್ಧೆ  ಅಭೂತಪೂರ್ವ ಯಶಸ್ಸು:  ಎಲ್ಲರೂ ಕ್ರೀಡೆಯಲ್ಲಿ ಭಾಗಿಯಾಗಿ ಆರೋಗ್ಯ ಕಾಪಾಡಿಕೊಳ್ಳಿ: ಸಂಸದ ಯದುವೀರ್‌ ಒಡೆಯರ್‌ ಕರೆ

ಮೈಸೂರು, ನ. 30: ಸಾಂಸ್ಕೃತಿಕ ರಾಜಧಾನಿ ಮೈಸೂರು ಕಳೆದ ಕೆಲವು ದಿನಗಳಿಂದ ಕ್ರೀಡಾ ರಾಜಧಾನಿಯಾಗಿದೆ. ನಮ್ಮ ಪ್ರಧಾನಮಂತ್ರಿಗಳ ಆಶಯದಂತೆ ನಿರಂತರವಾಗಿ ಕ್ರೀಡಾ ಸ್ಪರ್ಧೆ ಆಯೋಜಿಸುತ್ತಿದ್ದು, ಇಂದು ನಡೆದ ಹಗ್ಗ- ಜಗ್ಗಾಟ ಕ್ರೀಡೆ ಭಾರಿ ಯಶಸ್ಸು ಕಂಡಿದೆ ಹಾಗೂ ಭಾರಿ ಆಕರ್ಷಣೆ ಪಡೆದಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ. 

ಸಂಸದರ ಕ್ರೀಡಾ ಮಹೋತ್ಸವದ ಫಿಟ್‌ ಯುವ ಫಾರ್‌ ವಿಕಸಿತ್‌ ಭಾರತದ ಯೋಜನೆಯಡಿ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಹಗ್ಗ-ಜಗ್ಗಾಟ ಉದ್ಘಾಟನೆ ನಂತರ ಸಂಸದರು ಮಾತನಾಡಿದರು.

 ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಹಳ್ಳಿ ಸೊಗಡಿನ "ಹಗ್ಗ-ಜಗ್ಗಾಟ" ಸ್ಪರ್ಧೆಯಲ್ಲಿ ಇಷ್ಟೊಂದು ಜನರು ಭಾಗವಹಿಸಿದ್ದು ನಿಜಕ್ಕೂ ಖುಷಿ ತಂದಿದೆ ಎಂದರು. ಮೈಸೂರಿನ ವಿಶ್ವವಿದ್ಯಾಲಯದ ಓವಲ್‌ ಗ್ರೌಂಡ್‌ ನಿಜಕ್ಕೂ ಇಂದು ಕ್ರೀಡಾ ಸಂಗಮಕ್ಕೆ ಸಾಕ್ಷಿಯಾಗಿತ್ತು ಎಂದು ಯದುವೀರ್ ಒಡೆಯರ್ ತಿಳಿಸಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಚಂದ್ರಕಲಾ ಮಾತನಾಡಿ, ಈ ರೀತಿಯ ಪಂದ್ಯಗಳು ಆಯೋಜನೆಗೊಂಡಿದ್ದು ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡರು.

ಮೈಸೂರು ಸಿಟಿ ಪೊಲೀಸಿನ ಶಿವಕುಮಾರ್ ಮಾತನಾಡಿ, ಇಂಥ ಕ್ರೀಡಾಕೂಟಗಳು ನಿರಂತರ ನಡೆದರೆ ನಮ್ಮ ಊರಿನ ಪ್ರತಿಭೆಗಳಿಗೆ ಅವಕಾಶ ದೊರಕಿದಂತಾಗುತ್ತದೆ ಎಂದರು. ಮೈಸೂರು ಪ್ಯಾಂಥರ್ಸ್ ನ ರಮೇಶ್ ಮಾತನಾಡಿ, ಸಂಸದ ಯದುವೀರ್ ಒಡೆಯರ್ ನೇತೃತ್ವದಲ್ಲಿ ಸ್ಪರ್ಧೆಗಳು ಆಯೋಜನೆಗೊಳ್ಳುತ್ತಿದೆ. ಇದು ಹೀಗೆ ಮುಂದುವರಿಯಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಂದ್ಯಾವಳಿಯಲ್ಲಿ 35ಕ್ಕೂ ಹೆಚ್ಚು ತಂಡಗಳು ಹಾಗೂ 300ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸಿದ್ದರು.

ಶಾಸಕ ಶ್ರೀವತ್ಸ ಹಾಗೂ ಮಾಜಿ‌ ಶಾಸಕ ನಾಗೇಂದ್ರ, ನಿಖಿಲೇಶ್, ಕೇಬಲ್ ಮಹೇಶ್, ದಿನೇಶ್ ಗೌಡ, ರಾಕೇಶ್ ಬಟ್ಟ್, ಪೈಲ್ವಾನ್ ರವಿ, ಗೋಪಾಲ್ ಅರಸು ಉದ್ಘಾಟನಾ ಸಮಾರಂಭದ ವೇಳೆ ಹಾಜರಿದ್ದರು

ಬಹುಮಾನ ವಿಜೇತರು‌ಪುರುಷರ ವಿಭಾಗ

 560 ಕೆಜಿಗಿಂತ ಕಡಿಮೆ ವಿಭಾಗದಲ್ಲಿ ಮೈಸೂರು ಪ್ಯಾಂಥರ್ಸ್ ಪ್ರಥಮ, ಯದುವೀರ್ ಬ್ರಿಗೇಡ್ ಎರಡನೇ ಸ್ಥಾನ ಪಡೆಯಿತು. 640 ಕೆಜಿಗಿಂತ ಕಡಿಮೆ ವಿಭಾಗದಲ್ಲಿ ಫೈರ್ ಫೈಟರ್ಸ್ ಪ್ರಥಮ, ಮೈಸೂರು ಸಿಟಿ ಪೊಲೀಸ್ ತಂಡ ಎರಡನೇ ಸ್ಥಾನ ಗಳಿಸಿದೆ. 720 ಕೆಜಿಗಿಂತ ಕಡಿಮೆ ತೂಕದ ವಿಭಾಗದಲ್ಲಿ ಮೈಸೂರು ಟೈಗರ್ ಪ್ರಥಮ, ಸಿಎಫ್ಒ ಝೋನ್ ಮೈಸೂರು ಫೈರ್ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಮಹಿಳೆಯರ ವಿಭಾಗ ಮಹಿಳೆಯರ ವಿಭಾಗದಲ್ಲಿ 600 ಕೆಜಿಗಿಂತ ಕಡಿಮೆ ವಿಭಾಗದಲ್ಲಿ ಮಾರಮ್ಮ ಕೊಡಗು ತಂಡ, ಮೈಸೂರು ಬಿಜೆಪಿ ಮಹಿಳಾ ಮೋರ್ಛಾ ಕ್ರಮವಾಗಿ ಮೊದಲೆರಡು ಸ್ಥಾನ ಪಡೆಯಿತು. 540 ಕೆಜಿ ಕಡಿಮೆ ತೂಕದ ವಿಭಾಗದಲ್ಲಿ ಕೂರ್ಗ್ ವಿಂಗ್ಸ್ ಪ್ರಥಮ ಹಾಗೂ ರೈನ್ ಬೋ ವಾರಿಯರ್ಸ್ ತಂಡ ಎರಡನೇ ಸ್ಥಾನ ಪಡೆಯಿತು. ಪ್ರತಿ ವಿಭಾಗದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ, ಪದಕ, ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0