ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು ಪುಸ್ತಕ ಬಿಡುಗಡೆ ಕಾರ್ಯಕ್ರಮ

ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು ಪುಸ್ತಕ ಬಿಡುಗಡೆ ಕಾರ್ಯಕ್ರಮ

ವಿರಾಜಪೇಟೆ:ಕೆಂಪು ಪುಸ್ತಕ ದಿನಾಚರಣೆ ಅಂಗವಾಗಿ ಯು.ಎಸ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು ಎಂಬ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವು ವಿರಾಜಪೇಟೆ ಸಿಪಿಐಎಂ ಕಚೇರಿಯಲ್ಲಿ ನಡೆಯಿತು.

 ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಪಿಐಎಂ ಪಕ್ಷದ ಜಿಲ್ಲಾ ಹಿರಿಯ ಮುಖಂಡರಾದ ಡಾ. ದುರ್ಗಾ ಪ್ರಸಾದ್ ಅವರು, 1848ರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ರಚಿಸಿದ ಕಮ್ಯುನಿಸ್ಟ್ ಪ್ರಣಾಳಿಕೆಯ ಬಿಡುಗಡೆಯ ನೆನಪಿನಲ್ಲಿ ಜಗತ್ತಿನಾದ್ಯಂತ ಕೆಂಪು ಪುಸ್ತಕ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಅಮೇರಿಕಾ ಸಾಮ್ರಾಜ್ಯಶಾಹಿಯು ಸಮಾಜವಾದಿ ರಾಷ್ಟ್ರಗಳ ಸಂಪತ್ತನ್ನು ಲೂಟಿ ಮಾಡಲು ನಿರಂತರ ಮಿಲಿಟರಿ ದಾಳಿಗಳು ಮತ್ತು ರಾಜಕೀಯ ಒತ್ತಡಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ ಅವರು, ಭಾರತದ ಮೇಲೂ ನೇರ ಸೈನಿಕ ದಾಳಿಯ ಬದಲಿಗೆ ರೈತರು ಹಾಗೂ ಕಾರ್ಮಿಕರ ಪರವಾದ ಕಾನೂನುಗಳನ್ನು ಬದಲಾಯಿಸುವ ಮೂಲಕ ನೀತಿಗಳನ್ನು ತಮ್ಮ ಪರ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಅದಿಲ್ಲದೆ ದೇಶದ ಭವಿಷ್ಯಕ್ಕೆ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದರು.

 ಇದರ ವಿರುದ್ಧ ಸಂಘಟಿತ ಆಂದೋಲನಗಳು ನಡೆಯಬೇಕೆಂದು ಕರೆ ನೀಡಿದರು. ಕಮ್ಯುನಿಸ್ಟ್ ಪ್ರಣಾಳಿಕೆ ಬಿಡುಗಡೆಯ ದಿನವನ್ನು ಕೆಂಪು ಪುಸ್ತಕ ದಿನವಾಗಿ ಆಚರಿಸುವ ಪರಂಪರೆ ವಿಶ್ವದಾದ್ಯಂತ ಇದೆ ಎಂದು ಹೇಳಿದ ಅವರು, ಸಂಘಟನೆಗಳನ್ನು ಬಲಪಡಿಸಲು ಮತ್ತು ಗಟ್ಟಿಗೊಳಿಸಲು ಈ ಕೃತಿಯನ್ನು ಪುನಃ ಪುನಃ ಓದುವುದು ಅಗತ್ಯವಿದೆ. ಯಾವುದೇ ರಾಷ್ಟ್ರ ಸ್ವತಂತ್ರವಾದರೂ ಅದರ ಆರ್ಥಿಕ-ರಾಜಕೀಯ ವ್ಯವಸ್ಥೆಯನ್ನು ತಮ್ಮ ಪ್ರಭಾವದಲ್ಲಿ ಇಡುವುದು ಸಾಮ್ರಾಜ್ಯಶಾಹಿ ಶಕ್ತಿಗಳ ಪ್ರಮುಖ ಅಜೆಂಡಾ ಎಂದು ಹೇಳಿದರು.

 ಸಿಪಿಐಎಂ ಪಕ್ಷದ ಜಿಲ್ಲಾ ಸದಸ್ಯ ಎ.ಸಿ ಸಾಬು ಮಾತನಾಡಿ, 1848ರ ಫೆಬ್ರವರಿ 21ರಂದು ಪ್ರಕಟವಾದ ಕಮ್ಯುನಿಸ್ಟ್ ಪ್ರಣಾಳಿಕೆಯ ಬಿಡುಗಡೆಯ ನೆನಪಿನಲ್ಲಿ ಕೆಂಪು ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಈ ಕೃತಿಯನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ರಚಿಸಿದ್ದು, ಕಾರ್ಮಿಕ ವರ್ಗದ ಹಕ್ಕುಗಳು, ವರ್ಗ ಹೋರಾಟ ಮತ್ತು ಸಮಾಜ ಪರಿವರ್ತನೆಯ ತತ್ವಗಳನ್ನು ವಿವರಿಸುತ್ತದೆ. ರೆಡ್ ಬುಕ್ ದಿನದ ಉದ್ದೇಶ ಸಮಾಜದಲ್ಲಿ ಅಸಮಾನತೆ, ಶೋಷಣೆ, ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ ಎಂದು ಹೇಳಿದರು.

 ಹೊಸ ಕಾರ್ಮಿಕ ನೀತಿಗಳು ಸಂಘಟನೆಗಳನ್ನು ದುರ್ಬಲಗೊಳಿಸುವ ಮೊದಲ ಹೆಜ್ಜೆಯಾಗಿದ್ದು, ಕಾನೂನುಗಳ ಮೂಲಕ ಕಾರ್ಮಿಕ ಸಂಘಟನೆಗಳ ಶಕ್ತಿಯನ್ನು ಒಡೆಯಲು ಪ್ರಯತ್ನಗಳು ನಡೆಯುತ್ತಿವೆ. ಕರಾಳ ಕಾನೂನುಗಳನ್ನು ವಿರೋಧಿಸುವ ಸಂಘಟನೆಗಳ ಶಕ್ತಿಯನ್ನು ಏಕೀಕರಿಸಿ, ಚಳುವಳಿಗಳನ್ನು ಕಟ್ಟುವ ಮೂಲಕ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

 ಸಿಪಿಐಎಂ ಪಕ್ಷದ ಶಾಖ ಕಾರ್ಯದರ್ಶಿ ಶಾಜಿ ರಮೇಶ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಪದ್ಮಿನಿ ಶ್ರೀಧರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಿಭಾಗೀಯ ಸಂಚಾಲಕ ಸತೀಶ್, ದಲಿತ ಸಂಘರ್ಷ ಸಮಿತಿಯ ವಿರಾಜಪೇಟೆ ತಾಲೂಕು ಸಂಚಾಲಕ ಎಚ್.ಎಸ್ ಕುಮಾರ್, ಕಟ್ಟಡ ಕಾರ್ಮಿಕ ಸಂಘದ ಕೆ.ಕೆ ಹರಿದಾಸ್, ಖಾಸಿಂ, ಡಿವೈಎಫ್‌ಐ ಸಂಘಟನೆಯ ಜಿಲ್ಲಾ ಮುಖಂಡ ಸಾಧಿಕ್ ವೇದಿಕೆಯಲ್ಲಿದ್ದರು. ವಿವಿಧ ಕ್ಷೇತ್ರಗಳಲ್ಲಿ ದುಡಿಯುವವರು ಕಾರ್ಯಕ್ರಮದಲ್ಲಿದ್ದು ಸಂವಾದದಲ್ಲಿ ಭಾಗವಹಿಸಿದರು.