ಉತ್ತರ ಕನ್ನಡ: ಕುವೈತ್ ಉದ್ಯೋಗದ ಆಮಿಷ: 30 ಯುವಕರಿಗೆ ₹52 ಲಕ್ಷ ವಂಚನೆ
ಕಾರವಾರ, ಅ. 08: ವಿದೇಶದ ಉದ್ಯೋಗದ ಆಮಿಷ ತೋರಿಸಿ ನಿರುದ್ಯೋಗಿ ಯುವಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಕುವೈತ್‌ನ ಡಿಫೆನ್ಸ್ ಆಸ್ಪತ್ರೆಯಲ್ಲಿ ಉತ್ತಮ ಸಂಬಳದ ಉದ್ಯೋಗ ನೀಡುವುದಾಗಿ ನಂಬಿಸಿ, ಸುಮಾರು 30 ಯುವಕರಿಂದ ಒಟ್ಟು ₹52,01,185 ಹಣ ವಂಚಿಸಿದ ಘಟನೆ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ಜಾಫರ್ ಸಾದಿಕ್ ಮೋಕ್ತಸರ್, ನೌಶಾದ್ ಕ್ವಾಜಾ, ಹಾಗೂ ಹೈದ್ರಾಬಾದ್ ಮೂಲದ ಸುಜಾತ ಜಮ್ಮಿ ವಿರುದ್ಧ ದೂರು ದಾಖಲಾಗಿದೆ.
ಕಳೆದ ಡಿಸೆಂಬರ್ ನಲ್ಲಿ ಆರೋಪಿಗಳು ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು, “ಕುವೈತ್ ಡಿಫೆನ್ಸ್ ಆಸ್ಪತ್ರೆಯಲ್ಲಿ ಹುದ್ದೆಗಳು ಖಾಲಿ” ಎಂಬ ನಕಲಿ ಪ್ರಕಟಣೆ ತೋರಿಸಿ ಆಮಿಷ ನೀಡಿದ್ದರು. ತಿಂಗಳಿಗೆ ಲಕ್ಷಾಂತರ ಸಂಬಳ ಸಿಗುತ್ತದೆ ಎಂಬ ನಂಬಿಕೆ ಹುಟ್ಟಿಸಿ ಹಣ ವಸೂಲಿ ಮಾಡಲಾಗಿತ್ತು.
ಮಂಗಳೂರು ಹಾಗೂ ಕಾಸರಗೋಡಿನ ಯುವಕರೊಂದಿಗೆ ಸಂಪರ್ಕ ಹೊಂದಿದ್ದ ನೌಶಾದ್ ಕ್ವಾಜಾ, ಆರೋಪಿಗಳ ಪರವಾಗಿ ಹಣ ಸಂಗ್ರಹಣೆ ಕಾರ್ಯವನ್ನು ನಿರ್ವಹಿಸಿದ್ದರು. ಕೆಲವೊಮ್ಮೆ ಜಾಫರ್ ಮೊಬೈಲ್ ಸ್ವಿಚ್‌ಆಫ್ ಮಾಡುತ್ತಿದ್ದಾಗ ಅನುಮಾನ ವ್ಯಕ್ತವಾದರೂ, “ನನ್ನ ಮೇಲೆ ನಂಬಿಕೆ ಇಲ್ಲದಿದ್ದರೂ ಕುವೈತ್ ಡಿಫೆನ್ಸ್ ವೆಬ್‌ಸೈಟ್‌ನ ಪ್ರಕಟಣೆಯನ್ನು ನೋಡಿ” ಎಂದು ನಂಬಿಕೆ ಮೂಡಿಸಿದ್ದಾನೆ ಎನ್ನಲಾಗಿದೆ.
ಹಣ ನೀಡಿದ ಬಳಿಕವೂ ಉದ್ಯೋಗದ ಯಾವುದೇ ಸುಳಿವಿಲ್ಲದ ಕಾರಣ ನೌಶಾದ್ ಸೇರಿದಂತೆ ಅನೇಕರು ಆರೋಪಿಗಳ ಸಂಪರ್ಕಕ್ಕಾಗಿ ಯತ್ನಿಸಿದರೂ, ಜಾಫರ್ ಮೊಬೈಲ್ ಸ್ವಿಚ್‌ಆಫ್ ಮಾಡಿ ಪರಾರಿಯಾಗಿದ್ದಾನೆ.
ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನೌಶಾದ್ ಕ್ವಾಜಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವಂತೆ ಆಗ್ರಹಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧಾಚರಣೆ ಆರಂಭಿಸಿದ್ದಾರೆ.