ವಿರಾಜಪೇಟೆ:4ನೇ ವರ್ಷದ ಅಂತರ್ ಕೊಡವೇರಿ ಕೇರಿ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

ವಿರಾಜಪೇಟೆ:4ನೇ ವರ್ಷದ ಅಂತರ್ ಕೊಡವೇರಿ ಕೇರಿ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ

ವಿರಾಜಪೇಟೆ: ಕ್ರೀಡೆಗಳ ಹುಟ್ಟು ತಿಳಿಯುವುದು ಕಷ್ಟಸಾಧವಾದರು, ಕ್ರೀಡೆಗಳ ಮೇಲಿರುವ ಗೌರವದಿಂದಾಗಿ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾಕೂಟಗಳು ಆಯೋಜಿತವಾಗುತ್ತಿವೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಾತಂಡ ಜ್ಯೋತಿ ಪ್ರಕಾಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

 ವಿರಾಜಪೇಟೆ ಕೊಡವ ಸಂಘ ಒಕ್ಕೂಟದ ಆಶ್ರಯದಲ್ಲಿ ಆಯೋಜಕ ಸಂಘವಾದ ಅಪ್ಪಯ್ಯ ಸ್ವಾಮಿ ರಸ್ತೆ ವಿರಾಜಪೇಟೆಯ ಕಾವೇರಿ ಕೊಡವ ಕೇರಿ ಸಂಘವು 4 ನೇ ವರ್ಷದ ಅಂತರ ಕೊಡವ ಕೇರಿ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

 ಕಾರ್ಯಕ್ರಮಕ್ಕೆ ಆಗಮಿಸಿ ದೀಪ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತಾಡಿದ ಜ್ಯೋತಿ ಪ್ರಕಾಶ್ ಅವರು, ಸಮುದಾಯ‌ ಬಾಂಧವರ ಸಮಾಗಮಕ್ಕೆ ಕ್ರೀಡಾಕೂಟಗಳು ಪ್ರೇರೆಣೆಯಾಗಿದೆ. ಕೊಡವ ಹಾಕಿ ಪಂದ್ಯಾಟದ ಜನಕ ಪಾಂಡಂಡ ಕುಟ್ಟಪ್ಪ ಅವರನ್ನು ಸ್ಮರಿಸುತ್ತಾ ಅವರ ಕಲ್ಪನೆಗೂ ಮೀರಿ ಎರಡು ದಶಕಗಳಿಂದ ವೈಭವಯುಕ್ತವಾಗಿ ಕೊಡವ ಕುಟುಂಬಗಳ ಮಧ್ಯೆ ಹಾಕಿ ಪಂದ್ಯಾಟ ಇಂದಿಗೂ ನಡೆಯುತ್ತಾ ಬಂದಿದೆ. ಪ್ರತಿಯೊಂದು ಕ್ರೀಡೆಗಳಿಗೂ ತನ್ನಾದೆಯಾದ ಗೌರವವಿದೆ. ನೀತಿ ನಿಯಮಗಳಿವೆ.

ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಕ್ರೀಡಾಕೂಟಗಳನ್ನು ಹುಟ್ಟುಹಾಕುವುದು ಸುಲಭ ಆದರೆ ಮುಂದುವರೆಸಿಕೊಂಡು ಸಾಗುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಕೊಡವ ಕೇರಿಗಳ ಸದಸ್ಯರು ಪಂದ್ಯಾಟಗಳ ಆಯೋಜನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ‌ ಎಂದು ಪಂದ್ಯಾಟಗಳಿಗೆ ಶುಭಕೋರಿದರು.

 ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಟ್ಟಡ ಪೂವಣ್ಣ ಅವರು ಮಾತನಾಡಿ, ಸಂಘಟನಾತ್ಮಕವಾಗಿ ಚಿಂತಿಸಿದಲ್ಲಿ ಹೊಸ ಢವಿಷ್ಕಾರಗಳು ಮೂಡಿಬರುತ್ತದೆ. ಈ ನಿಟ್ಟಿನಲ್ಲಿ ಕ್ರೀಯಾಶೀಲ ಯುವ ಮನಸ್ಸುಗಳು ಪಂದ್ಯಾಟವನ್ನು ಆಯೋಜಿಸಿರುವುದು ಸಂತಸದಾಯಕ ಎಂದು ಹೇಳಿದರು.

 ಕೊಡವ ಕೇರಿಗಳ ಒಕ್ಕೂಟದ ಅಧ್ಯಕ್ಷರಾದ ಮೇಕೆರಿರ ರವಿ ಪೆಮ್ಮಯ್ಯ ಅವರು ಮಾತನಾಡಿ, ಸತತ ನಾಲ್ಕು ವಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಪಂದ್ಯಾಟಗಳನ್ನು ಅಯೋಜಿಸಿಕೊಂಡು ಬರುತಿರುವುದು ಶ್ಲಾಘನೀಯ.ಕೊಡವ ಕೇರಿಗಳ ಮಧ್ಯೆ ಸಾಮರಸ್ಯ ಬೆಸೆಯುವ ಪಂದ್ಯಾಟಗಳು ನಡೆಯಬೇಕು ಬದಲಿಗೆ ವೈರತ್ವದ ಪೈಪೋಟಿಗಳು ಬೆಳೆಯಬಾರದು ಎಂದು ಹೇಳಿದರು.

ಕಾವೇರಿ ಕೊಡವ ಕೇರಿ ಅಧ್ಯಕ್ಷರಾದ ಮೇರಿಯಂಡ ಅರಸು ಅಚ್ಚಮ್ಮ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರ್ ಕೊಡವ ಕೇರಿಗಳ ಮಧ್ಯೆ ಸಾಮರಸ್ಯ ಮತ್ತು ಭಾತೃತ್ವವನ್ನು ವೃದ್ಧಿಸಲು ಸತತ ನಾಲ್ಕು ವರ್ಷಗಳಿಂದ ಒಳಾಂಗಣ ಕ್ರೀಡೆಯಾದ ಬ್ಯಾಡ್ಮಿಂಟನ್ ಪಂದ್ಯಾಟಗಳನ್ನು ಅಯೋಜಿಸಿಕೊಂಡು ಬರಲಾಗುತ್ತಿದೆ. ನಗರದಲ್ಲಿ ಒಟ್ಟು 7 ಕೊಡವ ಕೇರಿಗಳು ಕಾರ್ಯನಿರ್ವಹಿಸುತ್ತಿದೆ. ಕೇರಿಗಳ ಮಧ್ಯೆ ಉತ್ತಮ ಭಾಂದವ್ಯ ಬೆಳೆಯುವಂತಾಗಬೇಕು.ಮುಂದೆಯು ಪಂದ್ಯಾಟಗಳು ಯಾವುದೇ ವಿಘ್ನಗಳಿಲ್ಲದೆ ಸಾಂಗವಾಗಿ ಸಾಗಬೇಕು ಎಂದು ಹೇಳಿದರು.

 ಕಾರ್ಯಕ್ರಮದ ವೇದಿಕೆಯಲ್ಲಿ ವಿರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿ ಪಟ್ಟೆಚೆರುವಂಡ ನಾಚಪ್ಪ ಅವರನ್ನು ಕಾವೇರಿ ಕೊಡವ ಕೇರಿ ವತಿಯಿಂದ ಅತ್ಮೀಯವಾಗಿ ಸನ್ಮಾನಿಸಲಾಯಿತು. ತಾಂತ್ರಿಕ ಸಲಹೆಗಾರರಾದ ನೆರವಂಡ ಸುರೇಶ್ ಮತ್ತು ಕಾವೇರಿ ಕೊಡವ ಕೇರಿಯ ಉಪದ್ಯಕ್ಷರಾದ ಅಂಜಪರುವಂಡ ಅನೀಲ್ ಮಂದಣ್ಣ ಉಪಸ್ಥಿತರಿದ್ದರು.

 ಮೇರಿಯಂಡ ಅರಸು ಅಚ್ಚಮ್ಮ ಸ್ವಾಗತಿಸಿ ಬೊಪ್ಪಂಡ ತ್ರೀಶೂಲ್ ಗಣಪತಿ ನಿರೂಪಿಸಿ ಚೊಟ್ಟೇರ ರವಿ ಅವರು ವಂದಿಸಿದರು. ಕಾವೇರಿ ಕೊಡವ ಕೇರಿ ಸಂಘದ ಪದಾಧಿಕಾರಿಗಳು, ಸದಸ್ಯರು ಅಯೋಜಕರು ಕೊಡವ ಕೇರಿ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಮತ್ತು ಜನಾಂಗ ಭಾಂದವರು ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ