ವಿರಾಜಪೇಟೆ:ಅಧಿಕಾರ ತ್ಯಜಿಸಿ ಜನಾಭಿಪ್ರಾಯದೊಂದಿಗೆ ಚುನಾವಣೆ ಎದುರಿಸಿ,ನಾಗರಿಕ ಸಮಿತಿ ಒತ್ತಾಯ

ವಿರಾಜಪೇಟೆ:ಅಧಿಕಾರ ತ್ಯಜಿಸಿ ಜನಾಭಿಪ್ರಾಯದೊಂದಿಗೆ ಚುನಾವಣೆ ಎದುರಿಸಿ,ನಾಗರಿಕ ಸಮಿತಿ ಒತ್ತಾಯ

ವಿರಾಜಪೇಟೆ: ಪ್ರಜಾಪ್ರಭುತ್ವದ ಮೌಲ್ಯ ಮತ್ತು ನಿಯಮಗಳ ಪ್ರಕಾರ ಪಟ್ಟಣ ಪಂಚಾಯಿತಿ ಅಧಿಕಾರದ ಅವಧಿ ಮುಗಿದೆ. ಆದರೆ‌ ಪ್ರಸ್ತುತ ಆಡಳಿತದಲ್ಲಿರುವ ಸದಸ್ಯರು ಅಧಿಕಾರದಾಹದಿಂದ ಅವಧಿ ವಿಸ್ತರಣೆ ಮಾಡಲು ಹೈಕೋರ್ಟ್ ಗೆ ಮೊರೆ ಹೋಗಿರುವುದು ಜನಾಭಿಪ್ರಾಯದ ವಿರುದ್ದವಾಗಿದೆ ಮತ್ತು ಹಾಸ್ಯಾಸ್ಪದವಾಗಿದೆ ಎಂದು ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಮಿತಿ ಸಂಯುಕ್ತ ಸಮಿತಿ ಟೀಕಿಸಿದೆ.

ನಾಗರಿಕ ಸಮಿತಿ- ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಸಮಿತಿ ವಿರಾಜಪೇಟೆ ವತಿಯಿಂದ ಗೃಹ ಕಛೇರಿಯಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾವಧಿ, ವಿಸ್ತರಣೆಗೆ ವಿರೋದ ವಿಷಯದ ಬಗ್ಗೆ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.

 ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕರಾದ ಡಾ. ಇ.ಆರ್. ದುರ್ಗಾಪ್ರಸಾದ್ ಅವರು, 2018 ರಲ್ಲಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿದ್ದು, 2025 ರ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಅಧಿಕಾರ ಅವಧಿ ಮುಕ್ತಯವಾಗಿದೆ. ಎರಡು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯು ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ವಾರ್ಡಗಳು ಹೆಚ್ಚಾಗಿವೆ. ಐದು ವರ್ಷಗಳ ಅವಧಿಯಲ್ಲಿ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿ ನಗರ ಅಭಿವೃದ್ದಿ ಶೂನ್ಯವಾಗಿದೆ ಎಂದು ಆರೋಪಿಸುತ್ತಾ ಪ್ರಸ್ತುತ ಆಡಳಿತ ನಡೆಸುತ್ತಿರುವ ಸದಸ್ಯರು ಅವಧಿ ವಿಸ್ತರಿಸಿ ಎಂದು ನ್ಯಾಯಾಲಯದ ಮೆಟ್ಟಲೀರಿರುವುದು ಪ್ರಜಾಪ್ರಭುತ್ವದ ವಿರುದ್ದವಾಗಿದೆ. 

ಜನಾದೇಶದ ಮೇಲೆ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರಬೇಕು. ಪ್ರಜಾಪ್ರಭುತ್ವದ ನಿಯಮ ಮತ್ತು ಮೌಲ್ಯಗಳಿಗೆ ಗೌರವ ನೀಡದೆ. ವಾಮಾ ಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮುಂದುವರೆಯಬಾರದು ಹಾಗೂ ಚುನಾವಣೆ ಮೂಲಕ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯುವಂತಾಗಬೇಕು.ಸದಸ್ಯರುಗಳ ನಡೆಯನ್ನು ನಾಗರಿಕರು ಪ್ರಶ್ನೀಸುವಂತಾಗಬೇಕು ಎಂದು ಹೇಳಿದರು.

ಸದಸ್ಯ ಮತ್ತು ವಕೀಲರಾದ ಕೆ.ವಿ. ಸುನೀಲ್ ಅವರು ಮಾತನಾಡಿ, ಪಟ್ಟಣ ಪಂಚಾಯಿತಿಗೆ ಅಯ್ಕೆಯಾದ ಸದಸ್ಯರು ಜನಪರ ಕಾರ್ಯಮಾಡಲು ವಿಫಲರಾಗಿದ್ದಾರೆ. ಆಡಳಿತ ಅವಧಿಯಲ್ಲಿ ನಗರ ಅಭಿವೃದ್ದಿಗೆ ಬಂದಿರುವ ಅನುದಾನ ಹಾಗೂ ಅಭಿವೃದ್ದಿ ಕಾರ್ಯಗಳ ಪಟ್ಟಿಯನ್ನು ಜನತೆಯ ಮುಂದಿಟ್ಟಿಲ್ಲ. ಜನತೆಯ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ.ಪುರಸಭೆಯಾಗಿ ಮೇಲ್ದರ್ಜೆಗೇರಿಕೆ ಕಂಡಂತೆ ಶಾಸಕರು ಸಾಕಷ್ಟು ಅನುದಾನ ತಂದಿದ್ದಾರೆ. ಅನುದಾನ ಬಳಕೆಯ ಬಗ್ಗೆ ಜನಸಮಾನ್ಯರಿಗೆ ಮಾಹಿತಿ ಇಲ್ಲದಾಗಿದೆ. ಪುರಸಭೆಯಾದ ಬಳಿಕ ಪುರಸಭೆಗೆ ಚುನಾವಣೆ ನಡೆಸಬೇಕಾಗಿತ್ತು ಆದರೆ ಜಿಲ್ಲಾಧಿಕಾರಿಗಳು, 

ಅಧಿಕಾರಿಗಳ ವರ್ಗ ಚುನಾವಣೆ ನಡೆಸಲು ಮುಂದಾಗಲಿಲ್ಲ. ಇದನ್ನು ಸಾರ್ವಜನಿಕರು ಪ್ರಶ್ನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಪುರಸಭೆಯ ಸದಸ್ಯರು ಪ್ರಜಾಪ್ರಭುತ್ವದ ವಿರೋಧವಾಗಿ ಅಧಿಕಾರ ವಿಸ್ತರಣೆ ಮಾಡಿ ಎಂದು ಕಾನೂನು ಹೋರಾಟ ಮುಂದಾದಲ್ಲಿ ಇದರ ವಿರುದ್ದವಾಗಿ ಕಾನೂನು ಹೋರಾಟಕ್ಕೆ ಸಮಿತಿ ಮುಂದಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾಗರಿಕ ಸಮಿತಿ-ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಸಮಿತಿ ವಿರಾಜಪೇಟೆ ಸಹ ಸಂಚಾಲಕರಾದ ಮಾಳೇಟಿರ ಎಸ್ ಕಾಳಯ್ಯ ಅವರು ಮಾತನಾಡಿ ಪುರಸಭೆಗೆ ಆಯ್ಕೆಯಾದ ಸದಸ್ಯರ ಅಧಿಕಾರ ಅವಧಿ ಐದು ವರ್ಷಗಳು.ಐದು ವರ್ಷಗಳ ಅಧಿಕಾರ ಅವಧಿ ಮುಗಿದ ಬಳಿಕ ಅಧಿಕಾರ ತ್ಯಜಿಸಬೇಕು. ಆದರೆ ಪ್ರಸ್ತುತ ಸದಸ್ಯರು ಅಧಿಕಾರದ ಮೇಲಿರುವ ವ್ಯಾಮೋಹದಿಂದ ಅಧಿಕಾರ ಅವಧಿ ವಿಸ್ತರಣೆಗಾಗಿ ನ್ಯಾಯಾಲಯ ಮೊರೆಹೋಗಿರುವುದು ಜನವಿರೋದಿ ನೀತಿಯಾಗಿದೆ ಎಂದು ಆರೋಪಿಸಿದರು. ತಮ್ಮ ಅಧಿಕಾರವನ್ನು ಶಾಶ್ವತಗೊಳಿಸಿ ತಾವು ನಡೆಸುತ್ತಿರುವ ಲೂಟಿಯನ್ನು ಮುಂದುವರೆಸಲು ನಡೆಯುತ್ತಿರುವ ಹುನ್ನಾರಕ್ಕೆ ಸರಕಾರವು ಅವಕಾಶ ನೀಡಬಾರದು ಮತ್ತು ಕಾನೂನು ರೀತಿಯಲ್ಲಿ ಚುನಾವಣೆ ನಡೆಸಬೇಕೆಂದು ಸಮಿತಿ ಸರ್ಕಾರವನ್ನು ಒತ್ತಾಯ ಮಾಡುತ್ತದೆ ಎಂದು ಹೇಳಿದರು.

ನಾಗರಿಕ ಸಮಿತಿ- ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಸಮಿತಿ ವಿರಾಜಪೇಟೆ ಸದಸ್ಯರಾದ ಪಿ.ಕೆ. ಅಬ್ದುಲ್ ರೆಹಮಾನ್, ಎನ್.ಕೆ.ಶರೀಫ್ ಮತ್ತು ತಾತಂಡ ದೇವಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ