ವಿರಾಜಪೇಟೆ; ಪರಿಹಾರ ನೀಡಿ,ದಬ್ಬಾಳಿಕೆ ಬೇಡ; ಅಭಿವೃದ್ದಿ ಹೆಸರಿನಲ್ಲಿ ನಾಗರಿಕರಿಗೆ ತೊಂದರೆ ನೀಡುವುದು ನಿಲ್ಲಿಸಿ: ನಾಗರಿಕ ಸಮಿತಿ ಆಗ್ರಹ
ವಿರಾಜಪೇಟೆ; ಅಭಿವೃದ್ದಿ ಹೆಸರಿನಲ್ಲಿ ಪರಿಹಾರ ನೀಡದೆ ಕಾಂಗ್ರೆಸ್ ಕೆಲವು ಸದಸ್ಯರ ಕುಮ್ಮಕ್ಕಿನಿಂದ ಮುಖ್ಯಾಧಿಕಾರಿಗಳು ಕಾಂಗ್ರೇಸ್ ಪಕ್ಷದ ಕೈಗೊಂಬೆಯಂತೆ ವರ್ತನೆ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳು ಸೇರಿದಂತೆ ನಿರ್ಗತಿಕ ಜನರ ಮನೆಗಳನ್ನು ತೆರವು ಮಾಡುವಂತೆ ಒತ್ತಡ ಹೇರುತ್ತಿರುವುದು ಖಂಡಿಸುತ್ತೇವೆ ಎಂದು ನಾಗರಿಕ ಸಮಿತಿಯ ಸಂಚಾಲಕರಾದ ಡಾ. ಇ.ಆರ್. ದುರ್ಗಾಪ್ರಸಾಸ್ ಅವರು ಆರೋಪಿಸಿದರು.
ನಗರದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ವಾಸ ಮಾಡುತ್ತಿರುವ ನಾಗರಿಕರು ಮತ್ತು ನಾಗರಿಕ ಸಮಿತಿ ಸಂಚಾಲಕರು ಮುಖ್ಯ ರಸ್ತೆ ದುರಸ್ಥಿ ಹೆಸರಿನಲ್ಲಿ ಮುಖ್ಯಾಧಿಕಾರಿಗಳ ವರ್ತನೆ ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದರು.
ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಡಾ. ಇ.ಆರ್. ದುರ್ಗಾಪ್ರಸಾದ್ ಅವರು, ನಗರ ಅಭಿವೃದ್ದಿ ಹೊಂದಬೇಕು. ಅಭಿವೃದ್ದಿ ಹೆಸರಿನಲ್ಲಿ ಸಾರ್ವಜನಿಕರ ಹಿತ ಕಾಪಾಡುವುದು ಮುಖ್ಯ. ರಸ್ತೆ ಅಗಲೀಕರಣಕ್ಕೆ ಮನೆ ಮತ್ತು ನಿವೇಶನ ಕಳೆದುಕೊಳ್ಳುವ ಭೀತಿ ಎದರುರಿಸುತ್ತಿರುವ ಹಲವು ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪರಿಹಾರ ನೀಡಿ ಎಂದು ದಾವೆ ಹೂಡಿದ್ದಾರೆ. ಹೀಗಿರುವಾಗ ಮನೆ ಮತ್ತು ಸಣ್ಣಪುಟ್ಟ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವ ಮಂದಿಗೆ ಮುಖ್ಯಾಧಿಕಾರಿಗಳು ನೀವಾಗಿ ಜಾಗ ಬಿಟ್ಟುಕೊಡದಿದ್ದರೆ ಜೆ.ಸಿ.ಬಿ ತಂದು ಒಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇವರು ಅಧಿಕಾರಿಗಳು ಕಾನೂನು ಬಗ್ಗೆ ಅರಿವು ಹೊಂದಬೇಕು. ಅಲ್ಲದೆ ಕಾಂಗ್ರೆಸ್ ಪಕ್ಷ ಕೈಗೊಂಬೆಯಂತೆ ವರ್ತನೆ ಮಾಡುವುದು ಸಮಂಜಸವಲ್ಲಾ ಎಂದು ಆರೋಪಿಸಿದರು.
ನಗರದಲ್ಲಿ ಅನೇಕ ಕಟ್ಟಡಗಳು ಕೆಳ ಅಂತಸ್ತು ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸದೆ, ಕಾನೂನು ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಜೀವಂತ ನಿರ್ದೇಶನಗಳಿವೆ. ಮುಖ್ಯಾಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಕೆಲವು ಮಂದಿ ಸದಸ್ಯರಿಗೆ ಅರಿವಿಗೆ ಬಂದರು ಸುಮ್ಮನಿದ್ದು ಪರಿಹಾರ ಹೊಂದಲು ಸಹಕಾರ ನೀಡದೆ ರಸ್ತೆ ಅಗಲೀಕರಣಕ್ಕೆ ಹೆಸರಿನಲ್ಲಿ ದಬ್ಬಾಳಿಕೆ ಮಾಡುತ್ತಿರುವುದು ಶೋಚನೀಯ ಎಂದರು. ಅಧಿಕಾರಿಗಳು, ಕಾಂಗ್ರೆಸ್ ಸದಸ್ಯರ ಗೊಡ್ಡು ಬೆದರಿಕೆಗೆ ಕಿವಿಕೊಡದೆ ಕಾನೂನು ಹೋರಾಟಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ವಕೀಲ ಟಿ.ಪಿ ಕೃಷ್ಣ ಅವರು ಮಾತನಾಡಿ,1904 ರಲ್ಲಿ ನಾಕಶೆ ಹೊಂದಿಕೊಂಡಿರುವ ಪುರಸಭೆಯು ಮಧ್ಯೆ ರಸ್ತೆಯಿಂದ ಎರಡು ದಿಕ್ಕಿನಲ್ಲಿ 30 ಅಡಿ ಎಂದು ಗುರುತಿಸಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. 1792 ರಲ್ಲಿ ಚಿಕ್ಕ ವೀರ ರಾಜೇಂದ್ರ ರಾಜರು ವಿವಿಧ ವರ್ಗಗಳ ನಾಗರಿಕರನ್ನು ನಗರಕ್ಕೆ ಬರಮಾಡಿಕೊಂಡು ನಿವೇಶನ ನೀಡಿ ಮನೆಗಳನ್ನು ನಿರ್ಮಾಣ ಮಾಡಿ ನಗರ ನಿರ್ಮಾಣವಾಗಿದೆ. ಮಗ್ಗುಲದಿಂದ ಆರಂಭವಾಗುವ ರಸ್ತೆ ಪೊಲೀಸ್ ಠಾಣೆಯ ಅನತಿ ದೂರದವರೆಗೆ ಕೊನೆಗೊಳ್ಳುತ್ತದೆ. ನಗರ ಹೊಂದಿರುವ ನೀಲಿ ನಕಾಶೆಯನ್ನು ಪ್ರದರ್ಶನ ಮಾಡುತ್ತಾ. 1904 ರ ಹಿಂದಿರುವ ಯಾವುದೇ ದಾಖಲೆಗಳು ಪುರಸಭೆಯ ಬಳಿಯಿಲ್ಲ. ಮನೆ ಮತ್ತು ನಿವೇಶನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ನಾಗರಿಕರು ಪರಿಹಾರ ಬಯಸುತ್ತಿದ್ದಾರೆ. ಅಭಿವೃದ್ದಿ ಹೆಸರಿನಲ್ಲಿ ಮನೆ ಕೆಡವಿ ನಾಗರಿಕರನ್ನು ಬೀದಿಪಾಲು ಮಾಡಿ ಗೋರಿಯ ಮೇಲೆ ರಸ್ತೆ ಅಭಿವೃದ್ದಿಗೆ ಮುಂದಾಗುವುದು ಶೋಭೆಯಲ್ಲ ಎಂದು ಆರೋಪಿಸಿದರು. ಅಭಿವೃದ್ದಿಗೆ ನಮ್ಮ ಸಹಮತವಿದೆ.ಆದರೆ ಪರಿಹಾರ ನೀಡಿ ಅಬಿವೃದ್ದಿಗೆ ಮುಂದಾಗಿ,ಇದೀಗ ಪರಿಹಾರ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ಮುಂದಿನ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯಯುತ ಹಕ್ಕು ಪಡೆಯಲು ಮುಂದಾಗುತ್ತೇವೆ ಎಂದು ಹೇಳಿದರು.
ವಕೀಲ ಕೆ.ವಿ. ಸುನೀಲ್ ಅವರು ಮಾತನಾಡಿ, ವಿರಾಜಪೇಟೆ ನಗರ ವಾಹನ ದಟ್ಟಣೆ ಸಮಸ್ಯೆಯನ್ನು ಎದುರಿಸುತ್ತಿದೆ. ಸಮಸ್ಯೆ ಪರಿಹಾರಕ್ಕೆ ರಸ್ತೆ ಅಗಲೀಕರಣ ಕಾರಣ ಹೇಳುತ್ತಾ ಬಲತ್ಕಾರವಾಗಿ, ದರ್ಪ ಪ್ರದರ್ಶಿಸಿ ಮನೆ ನಿವೇಶನಗಳನ್ನು ಕಸಿದುಕೊಳ್ಳುವ ಹುನ್ನಾರ ಮಾಡುತ್ತಿದೆ ಅಡಳಿತ ವರ್ಗ, ಶಾಸಕರ ಹಿಂಬಾಲಕರು,ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕೆಲವು ಪ್ರಮುಖರು ಈ ಹಿಂದೆ ಇದ್ದ ಭಾ.ಜ.ಪ ಶಾಸಕರಿಗೆ ಎದುರಾಗಿ ರಸ್ತೆ ಆಗಲೀಕರಣ ವಿಷಯದಲ್ಲಿ ನಾಗರಿಕರ ಪರ ಧ್ವನಿ ಎತ್ತಿದ್ದರು. ಇಂದು ಅದೇ ಪಕ್ಷದ ಪ್ರಮುಖರು ಶಾಸಕರನ್ನು ಓಲೈಸುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಿದರು.
ಮುಖ್ಯಾಧಿಕಾರಿಗಳು ದರ್ಪ ಬಿಟ್ಟು ಕಾನೂನು ಅಡಿಯಲ್ಲಿ ನ್ಯಾಯ ಒದಗಿಸುವ ಪ್ರಯತ್ನ ಮಾಡಲಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೆಲ್ಲಮಕ್ಕಡ ಗಣಪತಿ ಉಪಸ್ಥಿತರಿದ್ದರು