ಮಡಿವಾಳ ಬಾಂಬ್ ಪ್ರಕರಣದ ಆರೋಪಿ, ವಿರಾಜಪೇಟೆ ಮೂಲದ ಅಬ್ದುಲ್ ಖಾದರ್ ಜೈಲಿನಲ್ಲಿ ನಿಧನ

ಮಡಿವಾಳ ಬಾಂಬ್ ಪ್ರಕರಣದ ಆರೋಪಿ, ವಿರಾಜಪೇಟೆ ಮೂಲದ ಅಬ್ದುಲ್ ಖಾದರ್ ಜೈಲಿನಲ್ಲಿ ನಿಧನ

ಬೆಂಗಳೂರು;2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ವೀರಾಜಪೇಟೆ ಮೂಲದ ಅಬ್ದುಲ್ ಖಾದರ್ (60) ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ 2010ರಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಅಬ್ದುಲ್ ಖಾದರ್ ಅಂದಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದನು. ಜೂನ್ 12ರಂದು ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆತನನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಹೃದಯಾಘಾತದಿಂದ ಅಬ್ದುಲ್ ಖಾದರ್ ಮೃತಪಟ್ಟಿದ್ದಾನೆ.

ಅತಿಯಾದ ಮಧುಮೇಹ, ಮೂತ್ರಪಿಂಡ ವೈಫಲ್ಯ ಮತ್ತು ಕಣ್ಣಿನ ದೃಷ್ಟಿನಷ್ಟ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಆತ ತೀವ್ರವಾಗಿ ಬಳಲುತ್ತಿದ್ದನು. 2020ರಲ್ಲಿ ಆತನ ಎಡಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಬೇಕಾಗಿ ಬಂದಿದ್ದರಿಂದ ಅಂದಿನಿಂದ ವೀಲ್‌ಚೇರ್‌ನಲ್ಲೇ ಇರಬೇಕಿತ್ತು. ಮಧುಮೇಹ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮೂತ್ರಪಿಂಡಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು. ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಇತರ ಸಂಬಂಧಿತ ಕಾಯಿಲೆಗಳೂ ಕಾಡುತ್ತಿದ್ದವು.

ಈತನ ಶವಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ಸಂಬಂಧಿಕರಿಗೆ ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಒಟ್ಟು 6 ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ, ಪ್ರತಿ ಬಾರಿಯೂ ಅದನ್ನು ತಿರಸ್ಕರಿಸಲಾಗಿತ್ತು. ಅಬ್ದುಲ್ ಖಾದರ್ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇತ್ತು. ಆದರೆ ನ್ಯಾಯಾಲಯದ ತೀರ್ಪು ಹೊರಬೀಳುವ ಮುನ್ನವೇ ಅಬ್ದುಲ್ ಖಾದರ್ ಕೊನೆಯುಸಿರೆಳೆದಿದ್ದಾನೆ.

ಮೂಲತಃ ವೀರಾಜಪೇಟೆ ನಿವಾಸಿಯಾಗಿದ್ದ ಅಬ್ದುಲ್ ಖಾದರ್, 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದನು. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ NIA ಅಬ್ದುಲ್ ಖಾದರ್‌ನನ್ನು ಬಂಧಿಸಿತ್ತು.

2008ರ ಜುಲೈ 25ರಂದು ಮಡಿವಾಳ ಬಸ್ ಡಿಪೋ ಸಮೀಪ ಶುಕ್ರವಾರ ಮಧ್ಯಾಹ್ನ 1.20ಕ್ಕೆ ಮೊದಲ ಬಾಂಬ್ ಸ್ಫೋಟ ನಡೆದಿತ್ತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಬೆಂಬಲದೊಂದಿಗೆ ಭಾರತದ ನಿಷೇಧಿತ ಉಗ್ರ ಸಂಘಟನೆ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ಸಿಮಿ ಸದಸ್ಯರು ನಡೆಸಿದ್ದ ಈ ಸರಣಿ ಸ್ಫೋಟವನ್ನು ನಗರದ ವಿವಿಧೆಡೆಗಳಲ್ಲಿ 2.40ರವರೆಗೆ 8 ಕಡೆಗಳಲ್ಲಿ ನಡೆಸಲಾಗಿತ್ತು. ಇದರಲ್ಲಿ ಒಬ್ಬರು ಮೃತಪಟ್ಟು 20 ಜನರು ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚು ನಡೆಸಿ ಬೆಂಬಲಿಸಿದ ಆರೋಪದಲ್ಲಿ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಶುಂಠಿ ಕೃಷಿಯ ನೆಪದಲ್ಲಿ ಅಡಗುದಾಣ ಮಾಡಿಕೊಂಡಿದ್ದ ತಡಿಯಂಟವಿಡೆ ನಸೀರ್ ಎಂಬಾತನನ್ನು 2010ರಲ್ಲಿ ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತೀಯ ಸೇನೆ ಬಂಧಿಸಿತ್ತು. ಆತ ಹಾಗೂ ಆತನ ಸಹಚರರು ಈಗಲೂ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದಾರೆ.