‘ಸಂಬಂಧಿಕರು ಕಸ್ಟಮ್ಸ್‌ ಬಲೆಗೆ ಬಿದ್ದಿದ್ದಾರೆ’ ಎಂಬ ಕರೆ ಬಂದರೆ ಎಚ್ಚರಿಕೆ: ಕೆಂಪೇಗೌಡ ವಿಮಾನ ನಿಲ್ದಾಣ ಕಸ್ಟಮ್ಸ್ ಇಲಾಖೆಯಿಂದ ಸಾರ್ವಜನಿಕರಿಗೆ ಸೂಚನೆ

Dec 28, 2025 - 19:20
 0  390
‘ಸಂಬಂಧಿಕರು ಕಸ್ಟಮ್ಸ್‌ ಬಲೆಗೆ ಬಿದ್ದಿದ್ದಾರೆ’ ಎಂಬ ಕರೆ ಬಂದರೆ ಎಚ್ಚರಿಕೆ:   ಕೆಂಪೇಗೌಡ ವಿಮಾನ ನಿಲ್ದಾಣ ಕಸ್ಟಮ್ಸ್ ಇಲಾಖೆಯಿಂದ ಸಾರ್ವಜನಿಕರಿಗೆ ಸೂಚನೆ

ಬೆಂಗಳೂರು, ಡಿ. 27: ಕಸ್ಟಮ್ಸ್ ಅಧಿಕಾರಿಗಳಂತೆ ನಟಿಸಿ ಸಾರ್ವಜನಿಕರಿಂದ ಹಣ ದೋಚುವ ವಂಚನಾ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಕಸ್ಟಮ್ಸ್‌ ನಲ್ಲಿ ತಡೆದಿಟ್ಟಿದ್ದೇವೆ ಎಂದು ಸುಳ್ಳು ಹೇಳಿ, ಸಮಸ್ಯೆ ಬಗೆಹರಿಸುವ ನೆಪದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ವಂಚಕರು ಫೋನ್ ಕರೆ, ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಸಂಪರ್ಕಿಸಿ, ‘ಪ್ರಯಾಣಿಕನು ಕಸ್ಟಮ್ಸ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ; ತಕ್ಷಣ ದಂಡ ಅಥವಾ ಸುಂಕ ಪಾವತಿಸದಿದ್ದರೆ ಜೈಲು ಶಿಕ್ಷೆ ಎದುರಾಗಲಿದೆ’ ಎಂಬ ಭಯ ಹುಟ್ಟುಹಾಕುತ್ತಾರೆ. ಈ ರೀತಿಯ ಕರೆಗಳ ಮೂಲಕ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಗುರಿಯಾಗಿಸಿಕೊಂಡು ಹಣ ದೋಚಲಾಗುತ್ತಿದೆ.

ಕಸ್ಟಮ್ಸ್ ಇಲಾಖೆ ಸ್ಪಷ್ಟಪಡಿಸಿರುವಂತೆ, ಕಸ್ಟಮ್ಸ್ ಅಧಿಕಾರಿಗಳು ಎಂದಿಗೂ ದೂರವಾಣಿ, ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹಣ ಕೇಳುವುದಿಲ್ಲ. ವೈಯಕ್ತಿಕ ಬ್ಯಾಂಕ್ ಖಾತೆ, ಯುಪಿಐ ಅಥವಾ ಡಿಜಿಟಲ್ ವಾಲೆಟ್‌ಗೆ ಹಣ ವರ್ಗಾಯಿಸಲು ಸೂಚಿಸುವುದೂ ಇಲ್ಲ. ಎಲ್ಲಾ ಸರ್ಕಾರಿ ಪಾವತಿಗಳು ಅಧಿಕೃತ ಕೌಂಟರ್ ಅಥವಾ ಸರ್ಕಾರದ ಮಾನ್ಯ ಆನ್‌ ಲೈನ್ ಪೋರ್ಟಲ್ ಮೂಲಕ ರಸೀದಿಯೊಂದಿಗೆ ಮಾತ್ರ ನಡೆಯುತ್ತವೆ.

ವಂಚಕರ ಕಾರ್ಯವಿಧಾನವನ್ನು ವಿವರಿಸಿದ ಅಧಿಕಾರಿಗಳು, ಮೊದಲಿಗೆ ಆನ್‌ಲೈನ್ ಮೂಲಕ ಸಂಪರ್ಕಿಸಿ ನಂತರ ಸಂಬಂಧಿಕ ಅಥವಾ ಸ್ನೇಹಿತ ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಹೇಳಿ ಹಣ ವರ್ಗಾಯಿಸಲು ಒತ್ತಾಯಿಸುತ್ತಾರೆ. ಹಣ ವರ್ಗಾವಣೆ ಮಾಡಿದ ತಕ್ಷಣ ಸಂಪರ್ಕ ಕಡಿತಗೊಳಿಸುವುದು ಇವರ ರೂಢಿಯಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ವಂಚನಾ ಕರೆಗಳು ಬಂದಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ ತಕ್ಷಣವೇ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಬೇಕು. ವಂಚನೆಗೆ ಒಳಗಾದವರು ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡುವಂತೆ ಕಸ್ಟಮ್ಸ್ ಇಲಾಖೆ ಮನವಿ ಮಾಡಿದೆ. ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0