ಡೈವೋರ್ಸ್ ಕೊಟ್ಟು ಬಳಿಕ ಗಂಡ–ಮಗು ಬೇಕೆಂದ ಪತ್ನಿ: ಅರ್ಜಿ ಹೈಕೋರ್ಟ್ ಮಾಡಿದ್ದೇನು ಗೊತ್ತಾ!

Dec 27, 2025 - 13:54
 0  1.5k
ಡೈವೋರ್ಸ್ ಕೊಟ್ಟು ಬಳಿಕ ಗಂಡ–ಮಗು ಬೇಕೆಂದ ಪತ್ನಿ: ಅರ್ಜಿ  ಹೈಕೋರ್ಟ್ ಮಾಡಿದ್ದೇನು ಗೊತ್ತಾ!

ಬೆಂಗಳೂರು: ವಿಚ್ಛೇದನ ಮಂಜೂರಾದ ಬಳಿಕ ಗಂಡ ಹಾಗೂ ಅಪ್ರಾಪ್ತ ಮಗಳ ಪಾಲನಾ ಹಕ್ಕು ನೀಡಬೇಕು ಎಂದು ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಪತಿ ಮತ್ತು ಮಗುವನ್ನು ತ್ಯಜಿಸಿದ ನಂತರ ನಡೆದ ಹಲವು ಸುತ್ತಿನ ರಾಜಿ ಸಂಧಾನ ಸಭೆಗಳಲ್ಲಿಯೂ ಪತಿಯೊಂದಿಗೆ ತೆರಳಲು ಅಥವಾ ಮಗುವಿನ ಪಾಲನೆ ಪಡೆಯಲು ಪತ್ನಿ ಆಸಕ್ತಿ ತೋರಿಸಿಲ್ಲ. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಹಾಗೂ ಕೆ.ವಿ. ಅವಿಂದ್ ಅವರಿದ್ದ ವಿಭಾಗೀಯ ಪೀಠ, ವಿಚ್ಛೇದನ ಮತ್ತು ಮಗಳ ಮೇಲಿನ ಹಕ್ಕುಗಳನ್ನು ನೀಡಬೇಕು ಎಂದು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನೂ, ಮಾಸಿಕ ರೂ.20 ಸಾವಿರ ನಿರ್ವಹಣಾ ವೆಚ್ಚ ಪಾವತಿ ಆದೇಶ ರದ್ದುಪಡಿಸಬೇಕು ಎಂದು ಪತಿ ಸಲ್ಲಿಸಿದ್ದ ಅರ್ಜಿಯನ್ನೂ ವಿಚಾರಣೆ ನಡೆಸಿತು. ಈ ವೇಳೆ ವಿಚ್ಛೇದನ ಹಾಗೂ ಪಾಲನಾ ಹಕ್ಕಿನ ವಿಚಾರದಲ್ಲಿ ಪತ್ನಿಯ ಮನವಿಯನ್ನು ತಿರಸ್ಕರಿಸಿದ ಪೀಠ, ನಿರ್ವಹಣಾ ವೆಚ್ಚ ಪಾವತಿ ಆದೇಶದಲ್ಲಿ ಹಸ್ತಕ್ಷೇಪ ಮಾಡದೆ ಹಾಗೆ ಉಳಿಸಿದೆ.

ಪತ್ನಿ ಸಾರ್ವಜನಿಕವಾಗಿ ಪತಿಯನ್ನು ಆಶ್ಲೀಲ ಭಾಷೆಯಲ್ಲಿ ನಿಂದಿಸಿರುವುದು ಹಾಗೂ ಪತಿಯ ಪೋಷಕರನ್ನು ‘ಪಿಶಾಚಿಗಳು’ ಎಂದು ಉಲ್ಲೇಖಿಸಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ. 2014ರಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿರುವುದೂ ದಾಖಲೆಗಳಿಂದ ಸ್ಪಷ್ಟವಾಗಿದೆ. ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುವವರೆಗೆ ಪತ್ನಿ ಮಗುವಿನ ಪಾಲನೆ ಪಡೆಯಲು ಯಾವುದೇ ಪ್ರಯತ್ನ ಮಾಡಿರಲಿಲ್ಲ. ಮಗು ಜನಿಸಿದ ಬಳಿಕ ಸರಿಯಾಗಿ ನೋಡಿಕೊಳ್ಳದೆ, ಎರಡು ವರ್ಷದ ವಯಸ್ಸಿನಲ್ಲೇ ಮಗುವನ್ನು ತ್ಯಜಿಸಿದ್ದರೆಂಬ ಅಂಶವೂ ದಾಖಲೆಗಳಲ್ಲಿ ಉಲ್ಲೇಖವಾಗಿದೆ. 13 ವರ್ಷಗಳ ಬಳಿಕ ಪಾಲನಾ ಹಕ್ಕು ಕೋರಿರುವುದು ಪತ್ನಿಯ ನಡೆಯಲ್ಲಿ ಪ್ರಾಮಾಣಿಕತೆ ಕಾಣಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಮಗು ಪತಿಯ ಪೋಷಕರೊಂದಿಗೆ ಬೆಳೆಯುತ್ತಿದ್ದು, ಅವರು ಮಗುವನ್ನು ನೋಡಿಕೊಳ್ಳಲು ಅಸಮರ್ಥರು ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯವನ್ನು ಪತ್ನಿ ಸಲ್ಲಿಸಿಲ್ಲ. ಆದ್ದರಿಂದ ಮಗು ಪತಿಯ ಪೋಷಕರೊಂದಿಗೆ ಇರುವುದರಲ್ಲಿ ದೋಷವಿಲ್ಲ. ತಂದೆಯೇ ಮಗುವಿನ ಪೋಷಣೆಯನ್ನು ವಹಿಸಿಕೊಳ್ಳುವುದರಲ್ಲಿ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿರುವ ಮಹಿಳೆ 2011ರಲ್ಲಿ ಹಾವೇರಿಯ ಎಂಜಿನಿಯರ್‌ ರನ್ನು ವಿವಾಹವಾಗಿದ್ದರು. ಬಳಿಕ ದಂಪತಿ ಬೆಂಗಳೂರಿನಲ್ಲಿ ವಾಸವಿದ್ದರು. ಪತಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ನಿಂದನೆ, ಮನೆಯ ಕೆಲಸಗಳಲ್ಲಿ ನಿರಾಸಕ್ತಿ ಸೇರಿದಂತೆ ಹಲವು ಕಾರಣಗಳಿಂದ ದಾಂಪತ್ಯ ಸಂಬಂಧ ಹದಗೆಟ್ಟಿತ್ತು. 2012ರಲ್ಲಿ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ನಂತರ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಡೆದ ರಾಜಿ ಸಂಧಾನ ಸಭೆಯಲ್ಲಿ ಪತಿ ಹಾಗೂ ಅಪ್ರಾಪ್ತ ಮಗುವಿನಲ್ಲಿ ಆಸಕ್ತಿ ಇಲ್ಲವೆಂದು ಲಿಖಿತ ಹೇಳಿಕೆ ನೀಡಿ, ಮಗುವನ್ನು ಪತಿಗೆ ಒಪ್ಪಿಸಿ ಪೋಷಕರೊಂದಿಗೆ ತೆರಳಿದ್ದರು.

ಈ ಘಟನೆಗಳ ಬಳಿಕ 2016ರಲ್ಲಿ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯ ನಂತರ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದ್ದು, ಪತ್ನಿಗೆ ಮಾಸಿಕ ರೂ.20 ಸಾವಿರ ನಿರ್ವಹಣಾ ವೆಚ್ಚ ಪಾವತಿಸಲು ಆದೇಶಿಸಿತ್ತು. ಈ ಆದೇಶಗಳನ್ನು ಪ್ರಶ್ನಿಸಿ ದಂಪತಿ ಪ್ರತ್ಯೇಕವಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 1
Angry Angry 0
Sad Sad 2
Wow Wow 0