ಶಾಲೆಯ ಮುಂಭಾಗ ಕಾಡುಕೋಣ ಪ್ರತ್ಯಕ್ಷ :ವಿದ್ಯಾರ್ಥಿಗಳಲ್ಲಿ ಆತಂಕ
ಸಿದ್ದಾಪುರ:- ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚೆನ್ನಂಗಿ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಸೋಮವಾರ ಕಾಡುಕೋಣ ಪ್ರತ್ಯಕ್ಷವಾಗಿದ್ದು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶಾಲಾ ಆವರಣದ ಸಮೀಪ ಕಾಡುಕೋಣ ಸಂಚರಿಸುತ್ತಿರುವ ದೃಶ್ಯವನ್ನು ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಕೆಲಕಾಲ ಭಯಭೀತರಾಗಿದ್ದು, ಕಾಡುಕೋಣ ಸುರಕ್ಷಿತವಾಗಿ ಅರಣ್ಯದತ್ತ ತೆರಳಿದ ಬಳಿಕ ಪರಿಸ್ಥಿತಿ ಸಹಜಗೊಂಡಿತು.
ಈ ಪ್ರದೇಶದಲ್ಲಿ ಈಗಾಗಲೇ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಶಾಲೆಯ ಸುತ್ತಮುತ್ತ ಕಾಡುಪ್ರಾಣಿಗಳ ಓಡಾಟ ಸಾಮಾನ್ಯವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಾಲೆಯ ಸಮೀಪ ನಿರಂತರವಾಗಿ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶಾಲಾ ಆವರಣಕ್ಕೆ ತಡೆಗೋಡೆ ನಿರ್ಮಿಸಿ, ಕಾಡುಪ್ರಾಣಿಗಳ ನುಗ್ಗುವಿಕೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಾಲಾ ಮಕ್ಕಳ ಸುರಕ್ಷತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿರುವ ಶಾಲೆಗಳ ಸುರಕ್ಷತೆಗೆ ವಿಶೇಷ ಯೋಜನೆ ರೂಪಿಸುವಂತೆ ಸ್ಥಳೀಯರು ಸರ್ಕಾರವನ್ನು ಮನವಿ ಮಾಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
2
Wow
0
