ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ : ಅದೃಷ್ಟ ವಶಾತ್ ಪಾರು: ಕಾಡಾನೆ‌ ದಾಳಿಗೆ ಹಸು ಬಲಿ

ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ : ಅದೃಷ್ಟ ವಶಾತ್ ಪಾರು:  ಕಾಡಾನೆ‌ ದಾಳಿಗೆ ಹಸು ಬಲಿ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ತೋಟಕ್ಕೆ ತೆರಳಿದ್ದ ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ ನಡೆಸಿ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದು ಕಾಡಾನೆ ದಾಳಿಗೆ ಗ್ರಾಮದಲ್ಲಿ ಹಸು ಬಲಿಯಾದ ಘಟನೆ ನಡೆದಿದೆ.

ಬಲ್ಲಮಾವಟಿ ಪೇರೂರು ಗ್ರಾಮದ ನಿವಾಸಿ ಕಾಫಿ ಬೆಳಗಾರ ಅಪ್ಪಚ್ಚಿರ ಹ್ಯಾರಿ ಪೊನ್ನಪ್ಪ ಎಂಬುವವರೇ ಕಾಡಾನೆ ದಾಳಿಯಿಂದ ಗಾಯ ಗೊಂಡು ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರಾದ ಬೆಳೆಗಾರರಾಗಿದ್ದಾರೆ.

ಹ್ಯಾರಿ ಪೊನ್ನಪ್ಪ ಅವರು ತಮ್ಮ ಕಾಫಿ ತೋಟದಿಂದ ಶನಿವಾರ ಸಂಜೆ ಮನೆಗೆ ಹಿಂತಿರುಗಿ ಬರುವ ಸಂದರ್ಭ ಪೇರೂರು ಗ್ರಾಮದ ಮಚ್ಚುರ ಮಂದ್ ಸಮೀಪ ಕಾಡಾನೆ ಪೊನ್ನಪ್ಪ ಅವರನ್ನು ಅಟ್ಟಾಡಿಸಿ ದಾಳಿ ನಡೆಸಿದೆ. ಈ ವೇಳೆ ಪೊನ್ನಪ್ಪ ಅವರು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ತೋಟದ ಬೇಲಿಯ ತಂತಿಗೆ ಸಿಲುಕಿ ಬಿದ್ದಿದ್ದಾರೆ. ಈ ವೇಳೆ ಕಾಡಾನೆ ದಂತದಿಂದ (ಕೋರೆ )ಪೊನ್ನಪ್ಪ ಅವರ ಎದೆಯ ಭಾಗಕ್ಕೆ ತಿವಿದು ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.

 ಇದನ್ನು ನೋಡಿದ ಸ್ಥಳೀಯರು ಕಿರಿಚಾಡಿದಾಗ ಆನೆ ಬಿಟ್ಟು ತೋಟದೊಳಗೆ ಓಡಿಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಗೊಂಡಿದ್ದ ಪೊನ್ನಪ್ಪ ಅವರಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅದೇ ದಿನ ಗ್ರಾಮದ ನಿವಾಸಿ ಮಚ್ಚುರ ಹರೀಶ್ ಬಿದ್ದಪ್ಪ ಎಂಬುವವರ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿದ ಕಾಡಾನೆ ತಿವಿದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಹಸು ಭಾನುವಾರ ಸಾವನ್ನಪ್ಪಿದೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಚೇತನ್ ಹಾಗೂ ಸಿಬ್ಬಂದಿಗಳು ತೆರಳಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಉಪ ವಲಯ ಅರಣ್ಯಾಧಿಕಾರಿ ಕಾಳೇಗೌಡ ಹಾಗೂ ಸಿಬ್ಬಂದಿಗಳು, ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಲ್ಲಮಾವಟಿ ಪೇರೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಗ್ರಾಮಸ್ಥರು ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಸಂಬಂಧಪಟ್ಟ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಅಥವಾ ಹಿಡಿದು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.