ಮುತ್ತಿನ ಜೊತೆ ಮತ್ತು ಬರಿಸುವ ಔಷಧ; ಫಸ್ಟ್ ನೈಟ್ ಮರುದಿನವೇ ವಧು ಪರಾರಿ! | ಒಂಟಿ ಹುಡುಗರೇ ಟಾರ್ಗೆಟ್

ಮುತ್ತಿನ ಜೊತೆ ಮತ್ತು ಬರಿಸುವ ಔಷಧ; ಫಸ್ಟ್ ನೈಟ್ ಮರುದಿನವೇ ವಧು ಪರಾರಿ! |  ಒಂಟಿ ಹುಡುಗರೇ ಟಾರ್ಗೆಟ್

 ನವದೆಹಲಿ: ಉತ್ತರ ಪ್ರದೇಶದ ಅಲಿಗಢದಲ್ಲಿ ಮದುವೆಯ ಹೆಸರಿನಲ್ಲಿ ನಡೆದ ಭಾರೀ ವಂಚನೆಯೊಂದು ಬೆಳಕಿಗೆ ಬಂದಿದೆ. ‘ಫಸ್ಟ್ ನೈಟ್’ ದಿನದ ನಂತರ ವಧು ಹಣ ಮತ್ತು ಆಭರಣಗಳೊಂದಿಗೆ ಪರಾರಿಯಾಗುವ ಗ್ಯಾಂಗ್, ಯುವಕರನ್ನು ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದೆ. ಈ ಗ್ಯಾಂಗ್‌ನಿಂದ ಈಗಾಗಲೇ 10ಕ್ಕೂ ಹೆಚ್ಚು ಯುವಕರು ಬಲಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾ ಹಾಗೂ ಫೋನ್ ಮೂಲಕ ಒಂಟಿಯಾದ ಯುವಕರನ್ನು ಸಂಪರ್ಕಿಸಿ, ಆಕರ್ಷಕ ಹುಡುಗಿಯ ಫೋಟೋಗಳನ್ನು ತೋರಿಸುತ್ತಾರೆ. ನಂತರ ಮದುವೆಯ ಪ್ರಸ್ತಾಪ ಮಾಡಿ, ದೇವಸ್ಥಾನ ಅಥವಾ ಸಣ್ಣ ಹಾಲ್‌ನಲ್ಲಿ ಬೇಗ ಮದುವೆ ಆಯೋಜಿಸಲಾಗುತ್ತದೆ. ಮದುವೆಯಾದ ದಿನವೇ ಕುಟುಂಬದ ಎಲ್ಲರಿಗೂ ಮತ್ತಿನ ಔಷಧಿ ಮಿಶ್ರಿತ ಆಹಾರ ನೀಡಲಾಗುತ್ತದೆ. ಎಲ್ಲರೂ ಪ್ರಜ್ಞೆ ತಪ್ಪುತ್ತಿದ್ದಂತೆ, ವಧು ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಾಳೆ.

 ಹತ್ತುಕ್ಕೂ ಹೆಚ್ಚು ಯುವಕರು ತಮ್ಮ ಪತ್ನಿಯರು ಮದುವೆಯಾದ ಮರುದಿನ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಅಲಿಗಢದ ಪ್ರತೀಕ್ ಶರ್ಮಾ ಎಂಬವರು ಕರ್ವಾ ಚೌತ್‌ನ ಮರುದಿನ ₹4.01 ಲಕ್ಷ ಮತ್ತು ಚಿನ್ನಾಭರಣ ಕಳೆದುಕೊಂಡಿದ್ದಾರೆ. ಅವರ ಪತ್ನಿ ಶೋಭಾ, ಮತ್ತಿನ ಔಷಧಿ ಮಿಶ್ರಿತ ಆಹಾರ ನೀಡಿ ಪರಾರಿಯಾಗಿದ್ದಾಳೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

 ಈ ವಂಚನೆಯ ಪಿತಾಮಹ ಮುಕೇಶ್ ಗುಪ್ತಾ ಎಂಬಾತ. ಮದುವೆ ಮಾಡಲು ಆಸಕ್ತಿ ತೋರಿದ ಯುವಕರಿಂದ ಪ್ರತಿ ವ್ಯಕ್ತಿಯಿಂದ ₹1.25 ಲಕ್ಷ ರೂಪಾಯಿ ವಸೂಲಿ ಮಾಡುತ್ತಿದ್ದ ಎಂದು ವಂಚನೆಗೊಳಗಾದವರು ಹೇಳಿದ್ದಾರೆ. ಗ್ಯಾಂಗ್‌ನ ಬಹುತೇಕ ಮಹಿಳೆಯರು ಬಿಹಾರ ಮೂಲದವರಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಅಲಿಗಢದ ಮಾಜಿ ಮೇಯರ್ ಶಕುಂತಲಾ ಭಾರತಿ ಅವರ ಪ್ರಕಾರ, ಹಲವಾರು ಯುವಕರು ಹಣ ಮತ್ತು ಆಭರಣ ಕಳೆದುಕೊಂಡಿದ್ದಾರೆ. ಕೆಲವರು ಅವಮಾನದ ಭಯದಿಂದ ಪೊಲೀಸರಿಗೆ ದೂರು ನೀಡದೆ ಮೌನವಾಗಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಇದೇ ರೀತಿಯ ವಂಚನೆಗೆ ಒಳಗಾದವರು ಮುಂದಕ್ಕೆ ಬಂದು ದೂರು ನೀಡುವಂತೆ ಮನವಿ ಮಾಡಿದ್ದಾರೆ.