ಕೊಲೆ ಆರೋಪ ಸಾಬೀತಾದರೂ ಮಹಿಳೆ ಅಪರಾಧಮುಕ್ತ! ಮಂಗಳೂರು ನ್ಯಾಯಾಲಯದಿಂದ ಅಪರೂಪದ ತೀರ್ಪು

Dec 24, 2025 - 15:47
Dec 24, 2025 - 17:53
 0  1.3k
ಕೊಲೆ ಆರೋಪ ಸಾಬೀತಾದರೂ ಮಹಿಳೆ ಅಪರಾಧಮುಕ್ತ!    ಮಂಗಳೂರು ನ್ಯಾಯಾಲಯದಿಂದ ಅಪರೂಪದ ತೀರ್ಪು

ಮಂಗಳೂರು, ಡಿ. 24: ಪತಿಯನ್ನು ಕೊಲೆ ಮಾಡಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾದರೂ, ಮಾನಸಿಕ ಅಸ್ವಸ್ಥತೆಯನ್ನು ಆಧಾರವಾಗಿ ತೆಗೆದುಕೊಂಡು ಆರೋಪಿಯನ್ನು ನಿರಪರಾಧಿ ಎಂದು ಅಪರೂಪದ ತೀರ್ಪನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದೆ.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ 2022ರ ಜುಲೈ 5ರಂದು ನಡೆದ ಘಟನೆಯಲ್ಲಿ ಎಲಿಯಮ್ಮ ಎಂಬ ಮಹಿಳೆ ತನ್ನ ಪತಿ ಯೋಹಾನನ್ ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದರು. ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ವೇಳೆ ಆರೋಪಿ ಪತಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಸಾಕ್ಷಿದಾರರ ಹೇಳಿಕೆಗಳೂ ಆರೋಪದ ಪರವಾಗಿದ್ದರಿಂದ, ಕೊಲೆ ಕೃತ್ಯ ನಡೆದಿರುವುದು ನ್ಯಾಯಾಲಯದಲ್ಲಿ ಸಾಬೀತಾಯಿತು.

ಆದರೆ ಪಾಟಿ ಸವಾಲಿನ ಹಂತದಲ್ಲಿ ಆರೋಪಿಯ ಪರ ವಕೀಲರು, ಎಲಿಯಮ್ಮ ದೀರ್ಘಕಾಲದಿಂದ ಮಾನಸಿಕ ಅಸ್ವಸ್ಥತೆ ಹಾಗೂ ಭ್ರಮಾತ್ಮಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ವಾದ ಮಂಡಿಸಿದರು. ಕೃತ್ಯದ ಸಮಯದಲ್ಲಿ ತನ್ನ ನಡೆ ಕಾನೂನುಬಾಹಿರ ಎಂಬ ಅರಿವು ಅವರಿಗೆ ಇರಲಿಲ್ಲ; ಆದ್ದರಿಂದ ಅವರಿಗೆ ಕ್ರಿಮಿನಲ್ ಹೊಣೆಗಾರಿಕೆ ವಿಧಿಸಲಾಗುವುದಿಲ್ಲ ಎಂದು ಅವರು ತಿಳಿಸಿದರು.

ಎಲ್ಲ ವಾದ–ಪ್ರತಿವಾದಗಳನ್ನು ಪರಿಗಣಿಸಿದ ನ್ಯಾಯಾಧೀಶ ಮೋಹನ ಜೆ.ಎಸ್., ಕೊಲೆ ಕೃತ್ಯ ಸಾಬೀತಾದರೂ ಆರೋಪಿಯನ್ನು ಅಪರಾಧಿಕ ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಗುತ್ತದೆ ಎಂದು ತೀರ್ಪು ನೀಡಿದರು. ಜೊತೆಗೆ, ಆರೋಪಿಯ ಮಾನಸಿಕ ಸ್ಥಿತಿಯ ಮೌಲ್ಯಮಾಪನ ಮತ್ತು ಚಿಕಿತ್ಸೆಗಾಗಿ ಆಕೆಯನ್ನು ನಿಮ್ಹಾನ್ಸ್‌ಗೆ ಕಳುಹಿಸುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡಿದರು.

ಆರೋಪಿ ಬಿಡುಗಡೆಗೆ ಯೋಗ್ಯರೇ ಹಾಗೂ ಅವರಿಂದ ಸಮಾಜಕ್ಕೆ ಅಥವಾ ಆಕೆಯ ಜೀವಕ್ಕೆ ಯಾವುದೇ ಅಪಾಯವಿದೆಯೇ ಎಂಬ ಬಗ್ಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 2
Angry Angry 1
Sad Sad 0
Wow Wow 0