ಸಹಾಯ ಮಾಡುವ ನೆಪದಲ್ಲಿ ಸಾಮಾಜಿಕ ಜಾಲತಾಣದ ಸ್ನೇಹಿತನಿಂದ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಬೆಂಗಳೂರು, ಡಿ. 21: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಸಹಾಯ ಮಾಡುವ ನೆಪದಲ್ಲಿ ಮಹಿಳೆಯನ್ನು ದೈಹಿಕವಾಗಿ ಸಂಪರ್ಕ ಮಾಡುವಂತೆ ಒತ್ತಾಯಿಸಿ, ನಿರಂತರ ಕಿರುಕುಳ ನೀಡಿದ ಪರಿಣಾಮ ಆಕೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರು ನೀಡಿದ ದೂರಿನಂತೆ, ಸಾಮಾಜಿಕ ಜಾಲತಾಣದ ಮೂಲಕ ಪರಿತೋಷ್ ಯಾದವ್ ಎಂಬಾತ ಪರಿಚಯವಾಗಿದ್ದು, ಸ್ನೇಹ ಬೆಳೆಸಿಕೊಂಡಿದ್ದಾನೆ. ಈ ನಡುವೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮಹಿಳೆಯ ಮಗಳಿಗೆ ಗಾಯವಾಗಿರುವ ವಿಷಯ ತಿಳಿದ ಆತ, ಚಿಕಿತ್ಸೆಗಾಗಿ 30 ಸಾವಿರ ರೂ. ಹಣವನ್ನು ಸಾಲವಾಗಿ ನೀಡಿದ್ದಾನೆ. ಬಳಿಕ ಅದನ್ನೇ ಬಂಡವಾಳ ಮಾಡಿಕೊಂಡು ಮಹಿಳೆಯನ್ನು ದೈಹಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ನಿರಾಕರಿಸಿದ ಬಳಿಕ, ಆತ ನಿರಂತರವಾಗಿ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದು, ಅಶ್ಲೀಲ ಚಿತ್ರ ಹಾಗೂ ವೀಡಿಯೊಗಳನ್ನು ಕಳುಹಿಸಿ ತನ್ನ ಫ್ಲ್ಯಾಟ್‌ಗೆ ಬರಲು ಒತ್ತಡ ಹೇರಿದ್ದಾನೆ ಎನ್ನಲಾಗಿದೆ. ಹಣ, ಉದ್ಯೋಗ ಹಾಗೂ ಸುಖಕರ ಜೀವನದ ಭರವಸೆ ನೀಡಿ ಆಮಿಷ ಒಡ್ಡಿದ್ದಾನೆ. ಆಕೆ ಒಪ್ಪದಿದ್ದಾಗ ಸಾರ್ವಜನಿಕವಾಗಿ ಅವಮಾನಗೊಳಿಸುವ ಬೆದರಿಕೆಗಳನ್ನು ಹಾಕಿದ್ದಾನೆ ಎಂಬುದು ದೂರಿನಲ್ಲಿ ಉಲ್ಲೇಖವಾಗಿದೆ.
ನಿರಂತರ ಕಿರುಕುಳದಿಂದ ಮಾನಸಿಕವಾಗಿ ನೊಂದ ಮಹಿಳೆ, ಈ ವಿಚಾರ ಪತಿ ಗಮನಕ್ಕೆ ಬಂದ ನಂತರ ಕುಟುಂಬದಲ್ಲಿ ಕಲಹ ಉಂಟಾಗಿ, ಸ್ನೇಹಿತೆಯರ ಮನೆಯಲ್ಲಿ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಮೇರೆಗೆ ರಾಜಗೋಪಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
