ದೆವ್ವ ಹಿಡಿದಿದೆ’ ಎಂದು ಮಹಿಳೆಗೆ ಕಟ್ಟಿಗೆಯಿಂದ ಥಳಿತ; ಮಹಿಳೆ ಮೃತ್ಯು

Dec 27, 2025 - 18:25
Dec 27, 2025 - 19:19
 0  1.2k
ದೆವ್ವ ಹಿಡಿದಿದೆ’ ಎಂದು ಮಹಿಳೆಗೆ ಕಟ್ಟಿಗೆಯಿಂದ ಥಳಿತ; ಮಹಿಳೆ ಮೃತ್ಯು
Photo credit: TV09

ಕಲಬುರ್ಗಿ, ಡಿ. 27: ‘ದೆವ್ವ ಹಿಡಿದಿದೆ’ ಎಂಬ ನಂಬಿಕೆಯ ಕಲಬುರಗಿ ಜಿಲ್ಲೆಯ ಮಹಿಳೆಯೊಬ್ಬರನ್ನು ಬೇವಿನ ಕಟ್ಟಿಗೆಯಿಂದ ಥಳಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮುರುಮ್ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವೆಂಕಟೇಶ್ವರ ನಗರದ ನಿವಾಸಿ ಮುಕ್ತಬಾಯಿ ಎಂದು ಗುರುತಿಸಲಾಗಿದೆ. ಆರು ವರ್ಷಗಳ ಹಿಂದೆ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವನೊಂದಿಗೆ ಆಕೆಯ ವಿವಾಹ ನಡೆದಿತ್ತು. ದಂಪತಿಗೆ ಐದು ವರ್ಷದ ಗಂಡು ಮಗನಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಮುಕ್ತಬಾಯಿಗೆ ದೆವ್ವ ಹಿಡಿದಿದೆ ಎಂದು ಆರೋಪಿಸಿದ ಗಂಡನ ಮನೆಯವರು ಆಕೆಯ ಮೇಲೆ ಪದೇಪದೇ ಹಲ್ಲೆ ನಡೆಸುತ್ತಿದ್ದರೆಂದು ಆರೋಪಿಸಲಾಗಿದೆ. ನಿನ್ನೆ ಗಂಡ ಮನೆಯಲ್ಲಿ ಇಲ್ಲದ ವೇಳೆ, ಐದು ವರ್ಷದ ಮಗನ ಎದುರಲ್ಲೇ ಮುಕ್ತಬಾಯಿಯನ್ನು ಬೇವಿನ ಕಟ್ಟಿಗೆಯಿಂದ ಅಮಾನುಷವಾಗಿ ಥಳಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹಲ್ಲೆಯ ಬಳಿಕ ಆಕೆಯನ್ನು ಗಾಣಗಾಪುರಕ್ಕೆ ಕರೆದೊಯ್ದು ಪೂಜೆ ಹಾಗೂ ನದಿ ಸ್ನಾನ ಮಾಡಿಸಲಾಗಿದ್ದು, ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತಲೆಗೆ ಆಗಿದ್ದ ಗಂಭೀರ ಗಾಯಗಳಿಂದ ಚಿಕಿತ್ಸೆ ಫಲಿಸದೆ ಮುಕ್ತಬಾಯಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಳ ತಾಯಿ ತಿಪ್ಪವ್ವ, “ಮಗಳಿಗೆ ಯಾವುದೇ ದೆವ್ವ ಹಿಡಿದಿರಲಿಲ್ಲ. ಆಕೆಯನ್ನು ಹಿಂಸಿಸಬೇಡಿ ಎಂದು ಮನವಿ ಮಾಡಿದರೂ ಯಾರೂ ಕೇಳಲಿಲ್ಲ” ಎಂದು ಹೇಳಿದ್ದಾರೆ. ಮೃತಳ ಸಹೋದರಿ ಶ್ರೀದೇವಿ, ಇದು ಮೂಢನಂಬಿಕೆಯ ಹೆಸರಿನಲ್ಲಿ ನಡೆದ ನೇರ ಕೊಲೆ ಎಂದು ಆರೋಪಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆಳಂದ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆಯನ್ನು ಮಹಾರಾಷ್ಟ್ರದ ಮುರುಮ್ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 4
Wow Wow 1