ಮನೆಯಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಲೆ; ಕಳ್ಳರ ಕೃತ್ಯ ಶಂಕೆ

ಮನೆಯಲ್ಲಿ ಮಹಿಳೆಯ ಕತ್ತು ಹಿಸುಕಿ ಕೊಲೆ; ಕಳ್ಳರ ಕೃತ್ಯ ಶಂಕೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ 65 ವರ್ಷದ ಮಹಿಳೆಯೊಬ್ಬರನ್ನು ಅವರ ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಘಟನೆ ಉತ್ತರಹಳ್ಳಿಯಲ್ಲಿ ನಡೆದಿದ್ದು, ಮೃತರನ್ನು ಶ್ರೀಲಕ್ಷ್ಮಿ ಎಂದು ಗುರುತಿಸಲಾಗಿದೆ.

ಶ್ರೀ ಲಕ್ಷ್ಮಿ ಅವರ ಪತಿ ಅಶ್ವಥ್ ನಾರಾಯಣ್ ಅವರು ಕೆಲಸದಲ್ಲಿದ್ದ ವೇಳೆ ಪತ್ನಿಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸಂಜೆ ಬಾಡಿಗೆದಾರರ ಮೂಲಕ ವಿಚಾರಿಸಲು ತಿಳಿಸಿದ್ದಾರೆ. ಬಾಡಿಗೆದಾರರು ಮನೆಗೆ ತೆರಳಿ ನೋಡಿದಾಗ ಶ್ರೀಲಕ್ಷ್ಮಿ ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಮಹಿಳೆಯ ಕುತ್ತಿಗೆ, ತುಟಿ ಹಾಗೂ ಮುಖದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿವೆ. ಅಲ್ಲದೆ, ಚಿನ್ನದ ಮಂಗಳಸೂತ್ರವೂ ಕಾಣೆಯಾಗಿರುವುದು ಕಳ್ಳತನ ಉದ್ದೇಶದ ಕೊಲೆ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ಕೊಂದಿರಬಹುದು ಎಂಬುದು ಸ್ಪಷ್ಟವಾಗಿದೆ. ಕುಟುಂಬಕ್ಕೆ ಪರಿಚಿತರಾಗಿರುವ ಯಾರಾದರೂ ಈ ಕೃತ್ಯಕ್ಕೆ ಕಾರಣರಾಗಿರಬಹುದು ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಶಂಕಿತರ ಪತ್ತೆಗೆ ತನಿಖೆ ನಡೆಯುತ್ತಿದೆ.