ಗಂಡನ ಹತ್ಯೆ ಪ್ರಕರಣದ ಸಾಕ್ಷಿಯಾಗಿದ್ದ ಮಹಿಳೆಯ ಗುಂಡಿಕ್ಕಿ ಹತ್ಯೆ

Jan 12, 2026 - 23:45
 0  3.3k
ಗಂಡನ ಹತ್ಯೆ ಪ್ರಕರಣದ ಸಾಕ್ಷಿಯಾಗಿದ್ದ ಮಹಿಳೆಯ ಗುಂಡಿಕ್ಕಿ ಹತ್ಯೆ
Photo credit: TV09(ಫೋಟೋ: ರಚನಾ)

ಹೊಸದಿಲ್ಲಿ, ಜ. 11: ಗಂಡನ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಮಹಿಳೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ದೆಹಲಿಯ ಶಾಲಿಮಾರ್‌ ಬಾಗ್‌ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತರನ್ನು 44 ವರ್ಷದ ರಚನಾ ಯಾದವ್ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಬೆಳಗ್ಗೆ 10.59ರ ಸುಮಾರಿಗೆ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಪಿಸಿಆರ್ ಕರೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ರಚನಾ ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಬರುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ತಲೆಗೆ ಗುಂಡು ಹಾರಿದ ಪರಿಣಾಮ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರಲ್ಲಿ ರಚನಾ ಅವರ ಪತಿ ವಿಜೇಂದ್ರ ಯಾದವ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಪ್ರಕರಣದಲ್ಲಿ ರಚನಾ ಪ್ರಮುಖ ಸಾಕ್ಷಿಯಾಗಿದ್ದು, ಪ್ರಕರಣದ ವಿಚಾರಣೆ ಪ್ರಸ್ತುತ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದಲೇ ಈ ಹತ್ಯೆ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಯಾದವ್ ಸೇರಿದಂತೆ ಆರು ಮಂದಿಯನ್ನು ಆರೋಪಿಗಳು ಎಂದು ಗುರುತಿಸಲಾಗಿದೆ. ಐದು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಮುಖ ಆರೋಪಿ ಭರತ್ ಯಾದವ್ ತಲೆಮರೆಸಿಕೊಂಡಿದ್ದಾನೆ. ಆತನನ್ನು ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಅದರಲ್ಲಿ ಗುಂಡು ಹಾರಿಸಿದ ವ್ಯಕ್ತಿ ಮತ್ತು ಆತನ ಸಹಚರ ಸ್ಪಷ್ಟವಾಗಿ ಕಾಣಿಸುತ್ತಿದ್ದಾರೆ. ಹಲ್ಲೆಕೋರನ ಸಹಚರನು ದೆಹಲಿ ನೋಂದಣಿ ಸಂಖ್ಯೆಯ ಸ್ಪೋರ್ಟ್ಸ್ ಬೈಕ್‌ನಲ್ಲಿ ಕಾಯುತ್ತಿದ್ದನು. ದಾಳಿ ನಡೆಸಿದ ಬಳಿಕ ಆರೋಪಿಗಳು ವೇಗವಾಗಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಚನಾ ಅವರ ಸಾಕ್ಷ್ಯವು ಪತಿಯ ಕೊಲೆ ಪ್ರಕರಣದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಪ್ರಕರಣವನ್ನು ದುರ್ಬಲಗೊಳಿಸುವ ಹಾಗೂ ಇತರ ಸಾಕ್ಷಿಗಳಿಗೆ ಬೆದರಿಕೆ ಉಂಟುಮಾಡುವ ಉದ್ದೇಶದಿಂದಲೇ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತನ್ನ ತಂದೆಯ ಕೊಲೆ ಪ್ರಕರಣದಲ್ಲಿ ತಾಯಿ ದೃಢವಾಗಿ ಸಾಕ್ಷಿ ನೀಡಿದ್ದ ಕಾರಣ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಮೃತರ ಪುತ್ರಿ ಕನಿಕಾ ಆರೋಪಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 4
Wow Wow 1