ಸರಗಳ್ಳರ ದಾಳಿಗೆ ಮಹಿಳೆಯ ಕಿವಿ ಕಟ್; ಚಿನ್ನಾಭರಣ ಕಳವು

Dec 27, 2025 - 23:22
 0  733
ಸರಗಳ್ಳರ ದಾಳಿಗೆ ಮಹಿಳೆಯ ಕಿವಿ ಕಟ್; ಚಿನ್ನಾಭರಣ ಕಳವು
Photo credit: TV09 (ಫೋಟೋ: ಹಲ್ಲೆಗೊಳಗಾದ ಮಹಿಳೆ)

ವಿಜಯಪುರ, ಡಿ. 27: ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ತಲೆದೋರಿದ್ದು, ದಿವಟಗೇರಿ ಗಲ್ಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಅಮಾನುಷ ದಾಳಿ ನಡೆಸಿ ಚಿನ್ನಾಭರಣ ಕಳವು ಮಾಡಿದ ಘಟನೆ ಶುಕ್ರವಾರ ನಡೆದಿದೆ. ದಾಳಿಯ ವೇಳೆ ಕಿವಿಯೋಲೆ ಕಿತ್ತುಕೊಳ್ಳುವಾಗ ಮಹಿಳೆಯ ಕಿವಿ ಕತ್ತರಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ಹಾಕಲಾಗಿದೆ.

ಹಲ್ಲೆಗೊಳಗಾದವರು ಕಲಾವತಿ ಗಾಯ್ಕವಾಡ್ (45) ಎಂದು ಗುರುತಿಸಲಾಗಿದೆ. ಅವರು ಹಾಲು ತರಲು ಅಂಗಡಿಗೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ. ಮಾಂಗಲ್ಯ ಸರವನ್ನು ಕಿತ್ತುಕೊಳ್ಳುವ ವೇಳೆ ಕಿವಿಯೋಲೆ ಕಿತ್ತುಕೊಂಡು ಹೋಗಿದ್ದು, ಈ ಸಂದರ್ಭದಲ್ಲಿ ಕಿವಿಗೆ ಗಂಭೀರ ಗಾಯವಾಗಿದೆ. ಮುಖದ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳು ಸುಮಾರು 10 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ 1 ಗ್ರಾಂ ಚಿನ್ನದ ಕಿವಿಯೋಲೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಘಟನೆಯ ನಂತರ ಗಾಯಗೊಂಡ ಕಲಾವತಿ ಗಾಯ್ಕವಾಡ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕತ್ತರಿಸಿದ ಕಿವಿಗೆ ವೈದ್ಯರು ಹೊಲಿಗೆ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ. ಆರೋಪಿಗಳು ಗಾಂಜಾ ಮತ್ತಿನಲ್ಲಿದ್ದು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಸಂಬಂಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0