ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಜಲ ದಿನಾಚರಣೆ; ನೀರು ಜೀವಜಲ: ಜಲ ಸಂರಕ್ಷಣೆ ಎಲ್ಲರ ಹೊಣೆ; ಟಿ.ಜಿ.ಪ್ರೇಮಕುಮಾರ್

Mar 29, 2026 - 17:47
 0  118
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಜಲ ದಿನಾಚರಣೆ;  ನೀರು ಜೀವಜಲ: ಜಲ ಸಂರಕ್ಷಣೆ ಎಲ್ಲರ ಹೊಣೆ; ಟಿ.ಜಿ.ಪ್ರೇಮಕುಮಾರ್

ಕುಶಾಲನಗರ, ಜ.28 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ( ಕೂಡ್ಲೂರು ) ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯ್ತಿಯ ಜಲಜೀವನ್ ಮಿಷನ್ ಘಟಕ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸಹಯೋಗದೊಂದಿಗೆ ಶಾಲೆಯ ಇಕೋ- ಕ್ಲಬ್ , ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಹಾಗೂ ಎಸ್.ಡಿ.ಎಂ.ಸಿ. ಸಮಿತಿಯ ಆಶ್ರಯದಲ್ಲಿ ವಿಶ್ವ ಜಲದಿನ ಅಂಗವಾಗಿ ಏರ್ಪಡಿಸಿದ್ದ ಜಲ ಜಾಗೃತಿ ಅಭಿಯಾನ ಏರ್ಪಡಿಸಲಾಗಿತ್ತು.

 ವಿಶ್ವ ಜಲ ದಿನ : 2026 ದ ಅಂಗವಾಗಿ ಉತ್ತಮ ಭವಿಷ್ಯಕ್ಕಾಗಿ ನೀರಿನ ಸಂರಕ್ಷಣೆ" ಎಂಬ ವಿಷಯದ ಕುರಿತು ಮಾಹಿತಿ ನೀಡಿದ ಶಾಲೆಯ ಮುಖ್ಯೋಪಾಧ್ಯಾಯರೂ ಆದ ಪರಿಸರ ಕಾರ್ಯಕ್ರಮಗಳ ಸಂಘಟಕ ಟಿ.ಜಿ.ಪ್ರೇಮಕುಮಾರ್, ನೀರು ಜೀವಜಲ.ಅಮೂಲ್ಯ ನೈಸರ್ಗಿಕ ಸಂಪನ್ಮೂಲವಾದ ನೀರಿನ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನೀರಿನ ಮಹತ್ವ ತಿಳಿಸಬೇಕು ಎಂದರು. ವಿಶ್ವಸಂಸ್ಥೆಯ ವಾರ್ಷಿಕ ಆಚರಣೆಯ ಕಾರ್ಯಕ್ರಮವಾಗಿ 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.

ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ ಮಾತ್ರ. ಭೂಮಿಯಲ್ಲಿ ಲಭ್ಯವಿರುವ ನೀರನ್ನು ನಾಳಿನ ಉತ್ತಮ ಭವಿಷ್ಯತ್ತಿಗಾಗಿ ಅತ್ಯಂತ ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಕೆ‌ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ಏಕೈಕ ಮಾರ್ಗ ಎಂದರು. ‌‌‌‌ ಇಂದಿನ ನೀರಿನ ಉಳಿತಾಯ- ಭವಿಷ್ಯದ ಜೀವನದ ಉಳಿತಾಯ" ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬರೂ ನೀರನ್ನು ಜವಾಬ್ದಾರಿಯುತವಾಗಿ ಬಳಸಬೇಕು. ನೀರಿನ ಸಂರಕ್ಷಣೆ ಎಂದರೆ ಲಭ್ಯವಿರುವ ಜಲ ಸಂಪನ್ಮೂಲಗಳನ್ನು ಅತೀ ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಸಿ ಮುಂದಿನ ಪೀಳಿಗೆಗಾಗಿ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರೇಮಕುಮಾರ್ ಹೇಳಿದರು.

ಮಳೆ ನೀರಿನ ಕೊಯ್ಲು ಮತ್ತು ಅಂತರ್ಜಲ ಮರುಪೂರಣದ ಮೂಲಕ ನೀರನ್ನು ಸಂರಕ್ಷಿಸಿದರೆ ಇದು ಪರಿಸರ ಸಮತೋಲನ ಮತ್ತು ಜೀವಿಗಳ ಉಳಿವಿಗಾಗಿ ಅತ್ಯಗತ್ಯವಾಗಿದೆ ಎಂದರು. ನೀರಿನ ಸಂರಕ್ಷಣೆಯು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಜಲಸಂಪನ್ಮೂಲಗಳ ಸಮರ್ಥನೀಯ ಬಳಕೆಯನ್ನು ಖಚಿತಪಡಿಸಿಕೊಳ್ಳಲು ವಿವೇಕಯುತ ನಿರ್ವಹಿಸಬೇಕಿದೆ. ಜಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ನೀರಿನ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.

ನಾವು ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ಜಲ ಜಾಗೃತಿ ಮೂಡಿಸಿ ನೀರಿನ ಸಂರಕ್ಷಣೆ ಬಗ್ಗೆ ಅವರಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸಲು ಹೆಚ್ಚಿನ ಗಮನಹರಿಸಬೇಕು ಎಂದು ಪ್ರೇಮಕುಮಾರ್ ತಿಳಿಸಿದರು.

ಜಲಜೀವನ್ ಮಿಷನ್ ನ ಕಾರ್ಯಕ್ರಮ ಸಂಯೋಜಕ ಎಚ್.ಕೆ.ಜಗ್ಗೇಶ್ , ಜಲ ಸಂರಕ್ಷಣೆ ಕುರಿತು ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಹಲವಾರು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ನೀರಿನ ಸಂರಕ್ಷಣೆಗೆ ಎಲ್ಲರೂ ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದರು. ನೀರಿನ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದ ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯ ಮಾತನಾಡಿ, ನೀರಿನ ಮರುಬಳಕೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನೀರಿನ ಪ್ರಮುಖ ಸಂರಕ್ಷಣಾ ಕ್ರಮಗಳಾಗಿವೆ ಎಂದು ತಿಳಿಸಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ಗೈಡ್ಸ್ ಶಿಕ್ಷಕಿ ಕೆ.ಟಿ.ಸೌಮ್ಯ , ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಎನ್.ಸುಜಾತ, ಅನ್ಸಿಲಾ ರೇಖಾ, ಎಸ್.ಎಂ.ಗೀತಾ ಸಿಬ್ಬಂದಿ ಎಂ. ಉಷಾ ಹಾಗೂ ವಿದ್ಯಾರ್ಥಿಗಳು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0