ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ;ಎಜಿಓಆರ್‌ಸಿ ತಂಡ ಚಾಂಪಿಯನ್

May 11, 2026 - 20:14
May 11, 2026 - 20:15
 0  253
ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ;ಎಜಿಓಆರ್‌ಸಿ ತಂಡ ಚಾಂಪಿಯನ್
Photo: winner's& runner's

ಸೋಮವಾರಪೇಟೆ,ಮೇ.೧೦: ಯಂಗ್ ಇಂಡಿಯನ್ ಫಾಮರ‍್ಸ್ ಅಸೋಷಿಯೇಷನ್ ವತಿಯಿಂದ ಇಲ್ಲಿನ ಟರ್ಫ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳ ನಡುವಿನ ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಎಜಿಓಆರ್‌ಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೈನಲ್ ಪಂದ್ಯಾಟದಲ್ಲಿ ಸದನ್ ಕಮಾಂಡ್ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ, ರೂ. ೨ ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸದನ್ ಕಮಾಂಡ್ ತಂಡ ರೂ. ೧ಲಕ್ಷ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.

ಅಂತಿಮ ಪಂದ್ಯಾಟವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಹಾಕಿ ಪ್ರೇಮಿಗಳು, ಸಾರ್ವಜನಿಕರು ಆಗಮಿಸಿದ್ದರು. ಅಂತಿಮ ಪಂದ್ಯಾಟದ ಅಂತಿಮ ಕ್ಷಣದವರೆಗೂ ರಣರೋಚಕತೆಯಿಂದ ಪಂದ್ಯಾಟ ಕೂಡಿತ್ತು. ಪ್ರೇಕ್ಷಕರು ಗ್ಯಾಲರಿಯಲ್ಲಿ ಕುಳಿತು ಆಟಗಾರರನ್ನು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು. ಫೈನಲ್ ಪಂದ್ಯದ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಎಜಿಓಆರ್‌ಸಿ ತಂಡದ ನಲ್ಲುಲ್ಲಿ ಸೂರ್ಯ ಪಡೆದರು.

ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಆತಿಥೇಯ ಯಿಫಾ ತಂಡವನ್ನು ಕೆನರಾ ಬ್ಯಾಂಕ್ ತಂಡ ಮಣಿಸಿತು. ವಿಜೇತ ಕೆನರಾ ಬ್ಯಾಂಕ್ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್.ಸಿ., ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸದನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸಿದ್ದವು.

 ಪಂದ್ಯಾವಳಿಯ ಬೆಸ್ಟ್ ಗೋಲ್‌ಕೀಪರ್ ಆಗಿ ಕಸ್ಟಮ್ಸ್ ತಂಡದ ಶಾನ್, ಪ್ಲೇರ‍್ಸ್ ಆಫ್ ದ ಟೂರ್ನಮೆಂಟ್ ಆಗಿ ಸದನ್ ಕಮಾಂಡ್ ತಂಡದ ರಜಂತ್ ಸಿಂಗ್, ಬೆಸ್ಟ್ ಡಿಫೆಂಡರ್ ಎಜಿಓಆರ್‌ಸಿಯ ಸಾತ್ವಿಕ್, ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರನಾಗಿ ಎಜಿಓಆರ್‌ಸಿಯ ತ್ರಿಶೂಲ್, ಬೆಸ್ಟ್ ಫಾರ್ವರ್ಡ್ ಆಟಗಾರನಾಗಿ ಯಿಫಾ ತಂಡದ ಧ್ರುವ, ಬೆಸ್ಟ್ ಮಿಡ್ ಫೀಲ್ಡರ್ ಆಗಿ ಕೆನರಾ ಬ್ಯಾಂಕ್ ತಂಡದ ನಕುಲ್ ಅವರುಗಳು ಬಹುಮಾನ ಪಡೆದರು.

ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚುರಂಜನ್, ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಯಂಗ್ ಇಂಡಿಯನ್ ಫಾಮರ‍್ಸ್ ಅಸೋಷಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಲೀಡಿಂಗ್ ಎಡ್ಜ್ ಸಂಸ್ಥೆಯ ಮಾಲೀಕ ಎಡಿಕೇರಿ ಪ್ರಸನ್ನ, ಭಾರತೀಯ ಮಹಿಳಾ ಹಾಕಿ ತಂಡದ ಮಾಜೀ ತರಬೇತುಗಾರ್ತಿ ದೇವರಾಜಮ್ಮ, ಉದ್ಯಮಿಗಳಾದ ಆನಂದ್ ಸಿಂಘಾಲ್, ಅಚಿನ್, ಹಾಕಿ ಕೂರ್ಗ್ನ ಕಾರ್ಯದರ್ಶಿ ಚೇತನ್, ಭಾರತ ಮಹಿಳಾ ಹಾಕಿ ತಂಡದ ಕೋಚ್ ಟಿಮ್ ವೈಟ್, ಯಿಫಾ ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0