CRIME

ಯುವತಿ ವಿಚಾರದಲ್ಲಿ ಯುವಕನನ್ನು ಅಡ್ಡಗಟ್ಟಿ ಕೊಲೆ

admincoorgdaily

Photo credit: Etv bharath (ಫೋಟೋ: ಪವನ್ ಕುಮಾರ್)

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಯುವತಿ ವಿಚಾರದಲ್ಲಿ ಉಂಟಾದ ವೈಮನಸ್ಸಿಗೆ ಭೀಕರ ಹತ್ಯೆ ಮಾಡಿದ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ. ಯಲಹಂಕ–ಹಿಂದೂಪುರ ರಸ್ತೆ ಚರ್ಚ್‌ ಸಮೀಪ ಆಟೋ ತಡೆದು ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕೊಲೆಯಾದ ಯುವಕ ಪವನ್ ಕುಮಾರ್ (30) ಎಂದು ಗುರುತಿಸಲಾಗಿದೆ. ಜಾಲಪ್ಪ ಕಾಲೇಜಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಅವರು ತಾಯಿಯೊಂದಿಗೆ ಕಾಲೇಜಿನ ವಸತಿ ಗೃಹದಲ್ಲೇ ವಾಸವಾಗಿದ್ದರು. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬಂದ ಫೋನ್ ಕರೆ ಮೇಲೆ ಹೊರಗೆ ಬಂದ ಪವನ್, ಆಟೋದಲ್ಲಿ ಬರುತ್ತಿದ್ದಾಗಲೇ ಕಾರಿನಲ್ಲಿ ಬಂದ ಗುಂಪೊಂದು ಆಟೋವನ್ನು ಅಡ್ಡಗಟ್ಟಿ, ಪವನ್ ಮೇಲೆ ನೇರ ದಾಳಿ ನಡೆಸಿದೆ. ತೀವ್ರ ರಕ್ತಸ್ರಾವದಿಂದ ಪವನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. 

ಪವನ್ ಯುವತಿಯನ್ನು ಪ್ರೀತಿಸುತ್ತಿದ್ದ ವಿಚಾರಕ್ಕೆ ಈ ಮೊದಲು ಗಲಾಟೆ ನಡೆದಿತ್ತು. ಬಳಿಕ ಇಬ್ಬರೂ ದೂರವಾದರೂ, ಇತ್ತಿಚೆಗೆ ಮತ್ತೆ ಹತ್ತಿರವಾಗಿದ್ದರು ಎಂಬ ಮಾಹಿತಿ ಕುಟುಂಬಸ್ಥರಿಗೆ ಸಿಕ್ಕಿತ್ತು. ಇದೇ ವಿಚಾರವು ಹತ್ಯೆಗೆ ಕಾರಣವಾಗಿರಬಹುದು ಎಂದು ಚಿಕ್ಕಮ್ಮ ಅನಿತಾ ಅನುಮಾನ ವ್ಯಕ್ತಪಡಿಸಿದ್ದಾರೆ. 

“ಒಬ್ಬನೇ ಮಗನಿದ್ದ ನನ್ನ ಅಕ್ಕ ಈಗ ಏಕಾಂಗಿ. ಈ ನೋವನ್ನು ಹೇಗೆ ಸಹಿಸಿಕೊಂಡು ಬದುಕುತ್ತಾಳೋ ಗೊತ್ತಿಲ್ಲ,” ಎಂದು ಅವರು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂತು. 

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಡಿವೈಎಸ್‌ಪಿ ಪಾಡುರಂಗ, ನಗರ ಠಾಣೆಯ ಇನ್ಸ್‌ಪೆಕ್ಟರ್ ಅಮರೇಶಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.  

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ಎಲ್ಲಾ ದಿಕ್ಕುಗಳಿಂದವೂ ಮುಂದುವರಿದಿದೆ. “ಕುಟುಂಬಸ್ಥರು ಸೂಚಿಸಿದ ಅಂಶಗಳನ್ನೂ ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು,” ಎಂದು ಇನ್ಸ್‌ಪೆಕ್ಟರ್ ಅಮರೇಶಗೌಡ ತಿಳಿಸಿದ್ದಾರೆ.