ಜಮೀನು ವಿವಾದಕ್ಕೆ ಬಲಿಯಾದ ಯುವಕ; ತೋಟದಲ್ಲೇ ಹತ್ಯೆ

Dec 19, 2025 - 14:00
Dec 19, 2025 - 20:38
 0  1.5k
ಜಮೀನು ವಿವಾದಕ್ಕೆ ಬಲಿಯಾದ ಯುವಕ; ತೋಟದಲ್ಲೇ ಹತ್ಯೆ

ತುಮಕೂರು, ಡಿ. 19: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 25 ವರ್ಷದ ಯುವಕನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಮಧುಸೂದನ್‌ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ರಿಯಲ್‌ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಮಧುಸೂದನ್‌ ಅವರ ಕುಟುಂಬಕ್ಕೆ ಸೇರಿದ ಅಮಾನಿಕೆರೆ ಸಮೀಪದ 2.2 ಎಕರೆ ಜಮೀನನ್ನು ಮಾರಾಟ ಮಾಡುವ ವಿಚಾರವಾಗಿ ಕಳೆದ ಏಳು ವರ್ಷಗಳಿಂದ ವಿವಾದ ನಡೆಯುತ್ತಿತ್ತು. ಜಮೀನಿನ ದಾಖಲೆಗಳ ಸಮಸ್ಯೆಯಿಂದ ವ್ಯವಹಾರ ವಿಳಂಬವಾಗಿದ್ದು, 2018ರಲ್ಲಿ ಸಮಸ್ಯೆ ಬಗೆಹರಿದ ಬಳಿಕವೂ ಜಮೀನು ಮಾರಾಟಕ್ಕೆ ಮಧುಸೂದನ್‌ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ಜಮೀನು ವಿಚಾರವಾಗಿ ಚರ್ಚಿಸಲು ರಿಯಲ್‌ ಎಸ್ಟೇಟ್ ಉದ್ಯಮಿ ಮಹೇಶ್‌ ತೋಟಕ್ಕೆ ಬಂದಾಗ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಮಚ್ಚಿನಿಂದ ಮಧುಸೂದನ್‌ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಮಹೇಶ್‌ ಹಾಗೂ ಶಫಿವುಲ್ಲಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 3
Wow Wow 0