ಗೋಣಿಕೊಪ್ಪ: ಕಾವೇರಿ ಕಾಲೇಜು ಎನ್.ಎಸ್.ಎಸ್ ಘಟಕ ಸಮಾರೋಪ ಸಮಾರಂಭ

ಗೋಣಿಕೊಪ್ಪ: ಕಾವೇರಿ ಕಾಲೇಜು ಎನ್.ಎಸ್.ಎಸ್ ಘಟಕ ಸಮಾರೋಪ ಸಮಾರಂಭ
ಗೋಣಿಕೊಪ್ಪ: ಕಾವೇರಿ ಕಾಲೇಜು ಎನ್.ಎಸ್.ಎಸ್ ಘಟಕ ಸಮಾರೋಪ ಸಮಾರಂಭ

ಗೋಣಿಕೊಪ್ಪಲು: ಗೋಣಿಕೊಪ್ಪಲು ಕಾವೇರಿ ಕಾಲೇಜಿನ 2024-2025 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ದಯಾನಂದ. ಕೆ. ಸಿ ಅವರು ಹೂ ಕುಂಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೆ, ರಚನಾತ್ಮಕವಾದಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದೃಢ ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ಸ್ವಚ್ಛತಾ ಮನೋಭಾವ, ನಾಯಕತ್ವ ಗುಣ, ಸಹೋದರತ್ವವನ್ನು ಬೆಳಸುವುದರ ಜೊತೆಗೆ ಸರಳ ಜೀವನದ ಪಾಠವನ್ನು ಕಲಿಸಿಕೊಡುತ್ತದೆ ಎಂದರು.

ಮತ್ತೊಬ್ಬರು ಅತಿಥಿ ಹುಣಸೂರು ದೇವರಾಜ ಅರಸ್ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ಉಪನ್ಯಾಸಕ ಡಾ. ಎಂ. ಎನ್. ವನಿತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಸಾಧನೆಯ ಹಾದಿಯಲ್ಲಿ ಹಲವಾರು ಅಡ್ಡಿ ಆತಂಕಗಳು ಬರುತ್ತವೆ, ಅವನ್ನೆಲ್ಲ ದಿಟ್ಟ ತನದಿಂದ ಎದುರಿಸಿ ಗುರಿ ಸಾಧಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜೊತೆಗೆ ದೇಶಪ್ರೇಮ, ಪರಿಸರ ಪ್ರೇಮ, ಕರುಣೆ, ಸಹನೆ, ಸಹಕಾರ ಮನೋಭಾವನೆಯನ್ನು ಕಲಿಸುತ್ತದೆ ಎಂದರು.

ಈ ಸಂದರ್ಭ ಕಾವೇರಿ ಕಾಲೇಜಿನಲ್ಲಿ 15 ವರ್ಷ ಎನ್ ಎಸ್ ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ. ಎಂ. ಎನ್. ವನಿತ್ ಕುಮಾರ್, 10 ವರ್ಷ ಎನ್ ಎಸ್ ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಎನ್. ಪಿ. ರೀತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೆಸ್ಟ್ ಔಟ್ ಗೋಯಿಂಗ್ ಸ್ವಯಂ ಸೇವಕರಾಗಿ ಬೃಂದಾವನ್, ಧನ್ಯ, ಅತ್ಯುತ್ತಮ ಸ್ವಯಂಸೇವಕರಾಗಿ ರಾನ್ಸಿ ಕ್ರಿಸ್ಟೋಫರ್, ಧನ್ಯ. ಕೆ. ಕೆ., ಶಿಸ್ತು ಬದ್ಧ ಸ್ವಯಂಸೇವಕರಾಗಿ ರಿಷು ಕಾವೇರಪ್ಪ, ಫ್ಲೋರಿಯ, ಕ್ರಿಯಾಶೀಲ ಸ್ವಯಂ ಸೇವಕನಾಗಿ ಸೃಜನ್ .ಕೆ ಪ್ರಶಸ್ತಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಐ ಕ್ಯೂ ಎ ಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ಎನ್ ಎಸ್ ಎಸ್ ಅಧಿಕಾರಿಗಳಾದ ಎಂ. ಎ. ಕುಶಾಲಪ್ಪ, ಪೂಜಾ ಕೆ. ಎಸ್ ಹಾಗೂ ಎನ್ ಎಸ್ ಎಸ್ ಸ್ವಯಂಸೇವಕ ಸೇವಕಿಯರು ಹಾಜರಿದ್ದರು.