ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ: ಡಾ.ಮಂತರ್ ಗೌಡ
ಮಡಿಕೇರಿ :-ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಇವರ ಸಹಯೋಗದೊಂದಿಗೆ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ವಿಷಯದಡಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ 11 ನೇ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಮೂಲದ ಯೋಗ ವಿಶ್ವದಾದ್ಯಂತ ಪಸರಿಸಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯ, ಆಯಸ್ಸು ಹೆಚ್ಚಾಗಲಿದೆ. ಇದರಿಂದ ಕ್ರಿಯಾಶೀಲತೆ ಮತ್ತು ಚಲನಶೀಲತೆಯಿಂದ ಬದುಕು ನಡೆಸಲು ಸಹಕಾರಿಯಾಗಲಿದೆ. ಜೊತೆಗೆ ಮಾನಸಿಕವಾಗಿಯೂ ಸಹ ಸದೃಢರಾಗಿರಬಹುದು ಎಂದು ಡಾ.ಮಂತರ್ ಗೌಡ ಅವರು ಅಭಿಪ್ರಾಯಪಟ್ಟರು.ಯೋಗವು ಇಡೀ ವಿಶ್ವ ಮೆಚ್ಚುಗೆ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ದಿನನಿತ್ಯ ಅರ್ಧಗಂಟೆಯಾದರೂ ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಅವರು ಮಾತನಾಡಿ ಯೋಗ/ ವ್ಯಾಯಾಮ ಮಾಡುವುದರಿಂದ ಪ್ರತಿನಿತ್ಯ ಚಟುವಟಿಕೆಯಿಂದ ಇರಲು ಸಾಧ್ಯ. ಆ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮ ಮಾಡುವುದು ಅತ್ಯಗತ್ಯ ಎಂದರು.
ಅಂತರರಾಷ್ಟ್ರೀಯ 1@ ನೇ ಯೋಗ ದಿನಾಚರಣೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಹೀಗೆ ಎಲ್ಲರೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಯಶಸ್ಸುಗೊಳಿಸಿದ್ದಾರೆ ಎಂದು ತಿಳಿಸಿದರು.
ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಅವರು ಮಾತನಾಡಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಲವು ದಿನಗಳಿಂದ ಯೋಗ ಪೂರ್ವಾಭ್ಯಾಸ ನಡೆಸಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.
ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಅವರು ಯೋಗಾಭ್ಯಾಸ ಶಿಕ್ಷಣ ನೀಡಿದರು. ಸೂರ್ಯ ನಮಸ್ಕಾರ, ವೃಕ್ಷಾಸನ, ಪಾದಹಸ್ತಾಸನ, ಉರ್ದ್ವಾಸನ, ತಾಡಾಸನ, ಅರ್ಧ ಮತ್ಸೇಂದ್ರಾಸನ, ಭುಜಂಗಾಸನ, ಪವನಮುಕ್ತಾಸನ, ಭದ್ರಾಸನ, ತ್ರಿಕೋನಾಸನ, ಉಷ್ಟಾಸನ, ವಜ್ರಾಸನ, ಶಲಭಾಸನ, ಶಶಾಂಕಾಸನ, ಮಂಡೂಕಾಸನ, ವಕ್ರಾಸನ, ಮಕರಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಶವಾಸನ, ಕಪಾಲಭಾತಿ, ಶೀತಲಿ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನ, ನಾಡಿಶೋಧ ಪ್ರಾಣಾಯಾಮ ಹೀಗೆ ಹಲವು ರೀತಿಯ ಯೋಗ ಮಾಡಲಾಯಿತು.
ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ನಗರಸಭೆ ಸದಸ್ಯರು ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ರಾಮಚಂದ್ರ ಕಾಮತ್, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೊಡಗು ವೈದ್ಯಕೀಯ ಶಿಕ್ಷಣ, ಜಿಲ್ಲಾ ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಸಮಾಜ ಕಲ್ಯಾಣ, ಪದವಿ ಪೂರ್ವ ಶಿಕ್ಷಣ, ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಘಟಕ, ನೆಹರು ಯುವ ಕೇಂದ್ರ, ಕೊಡಗು ಯುವ ಒಕ್ಕೂಟ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಯೋಗ ಭಾರತಿ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ, ಆರ್ಟ್ ಆಪ್ ಲಿವಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್, ನೀಮಾ ಸಂಸ್ಥೆ ಹೀಗೆ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.