ಕರ್ನಾಟಕದ ಬ್ಯಾಂಕುಗಳಲ್ಲಿ ₹3,400 ಕೋಟಿ ಕ್ಲೇಮ್ ಆಗದೇ ಉಳಿದ ಠೇವಣಿ!

ಕರ್ನಾಟಕದ ಬ್ಯಾಂಕುಗಳಲ್ಲಿ ₹3,400 ಕೋಟಿ ಕ್ಲೇಮ್ ಆಗದೇ ಉಳಿದ ಠೇವಣಿ!

ಮಂಗಳೂರು, ಡಿ. 25:ಕರ್ನಾಟಕದ ವಿವಿಧ ಬ್ಯಾಂಕುಗಳಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಕ್ಲೇಮ್ ಆಗದೇ ಉಳಿದಿರುವ ಠೇವಣಿಗಳ ಮೊತ್ತ ₹3,400 ಕೋಟಿ ಇರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

ಆರ್‌ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಅರುಣ್ ಕುಮಾರ್ ಅವರು ಜಿಲ್ಲಾ ಸಮಾಲೋಚನಾ ಸಮಿತಿ (ಡಿಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಾಮರ್ಶಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯಲ್ಲಿ ಈ ಮಾಹಿತಿ ಹಂಚಿಕೊಂಡರು.

ಹತ್ತು ವರ್ಷಗಳಿಗೂ ಅಧಿಕ ಕಾಲ ಬಳಕೆಯಾಗದೇ ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆಗಳು ಹಾಗೂ ಠೇವಣಿಗಳನ್ನು ‘ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ’ಗೆ (ಡಿಇಎಎಫ್) ವರ್ಗಾಯಿಸಲಾಗುತ್ತದೆ. ದೇಶಾದ್ಯಂತ ಈ ನಿಧಿಯಲ್ಲಿ ಸುಮಾರು ₹75,000 ಕೋಟಿ ಸಂಗ್ರಹವಾಗಿದ್ದು, ಇದರಲ್ಲಿ ಕರ್ನಾಟಕದ ಬ್ಯಾಂಕುಗಳ ಪಾಲು ₹3,400 ಕೋಟಿ ಆಗಿದೆ.. 

ಅಧಿಕಾರಿಗಳ ಪ್ರಕಾರ, ಕ್ಲೇಮ್ ಆಗದೇ ಉಳಿದಿರುವ ಖಾತೆಗಳ ಪೈಕಿ ಶೇ. 80ರಷ್ಟು ಖಾತೆಗಳಲ್ಲಿ ₹10,000ಕ್ಕಿಂತ ಕಡಿಮೆ ಮೊತ್ತವಿದೆ. ಮೊಬೈಲ್ ಸಂಖ್ಯೆ ಮತ್ತು ಕೆವೈಸಿ ವಿವರಗಳು ನವೀಕರಿಸದೇ ಇರುವುದು, ಖಾತೆದಾರರ ನಿಧನ ಸೇರಿದಂತೆ ಹಲವು ಕಾರಣಗಳಿಂದ ಈ ಖಾತೆಗಳು ನಿಷ್ಕ್ರಿಯಗೊಂಡಿವೆ ಎಂದು ತಿಳಿಸಲಾಗಿದೆ.

ಬ್ಯಾಂಕುಗಳಲ್ಲಿ ಕ್ಲೇಮ್ ಆಗದೇ ಉಳಿದಿರುವ ಹಣವನ್ನು ಖಾತೆದಾರರು ಅಥವಾ ಅವರ ವಾರಸುದಾರರಿಗೆ ಮರಳಿಸುವ ಉದ್ದೇಶದಿಂದ ಆರ್‌ಬಿಐ ‘ನಿಮ್ಮ ಹಣ–ನಿಮ್ಮ ಹಕ್ಕು’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಿದೆ. ಮೂರು ತಿಂಗಳ ಹಿಂದೆ ಆರಂಭವಾದ ಈ ಅಭಿಯಾನ ಡಿಸೆಂಬರ್ 31ರವರೆಗೆ ನಡೆಯಲಿದೆ.

ಈ ಅವಧಿಯಲ್ಲಿ ನಿಷ್ಕ್ರಿಯ ಖಾತೆಗಳ ಖಾತೆದಾರರನ್ನು ಗುರುತಿಸಿ, ಅವರು ಜೀವಂತ ಇದ್ದರೆ ಖಾತೆಯನ್ನು ಮರುಸಕ್ರಿಯಗೊಳಿಸುವುದು ಅಥವಾ ಹಣವನ್ನು ಮರಳಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಖಾತೆದಾರರು ನಿಧನರಾಗಿದ್ದರೆ, ಕಾನೂನು ಪ್ರಕ್ರಿಯೆಯ ಮೂಲಕ ವಾರಸುದಾರರಿಗೆ ಹಣ ತಲುಪಿಸಲು ಕ್ರಮ ವಹಿಸಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಅನ್‌ಕ್ಲೇಮ್ಡ್ ಠೇವಣಿಗಳ ವಿವರಗಳನ್ನು ತಿಳಿದುಕೊಳ್ಳಲು ಆರ್‌ಬಿಐ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸಿದ್ದು, ಸಂಬಂಧಿತ ಬ್ಯಾಂಕ್ ಶಾಖೆಗೆ ತೆರಳಿ ಅಗತ್ಯ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಖಾತೆಯನ್ನು ಮರುಸಕ್ರಿಯಗೊಳಿಸಿ ಹಣವನ್ನು ಮರಳಿ ಪಡೆಯಬಹುದು.