ಸೀಗೆಹೊಸೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಭ್ರಮದ ‘ಕಲಿಕಾ ಹಬ್ಬ’: ಕಲಿಕಾ ಹಬ್ಬವು ಮಕ್ಕಳ ಸಂತಸದ ಕಲಿಕೆಗೆ ಸಹಕಾರಿ: ಎಚ್.ಎಸ್.ಚೇತನ್
ಕುಶಾಲನಗರ, ಜ.16: ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸೀಗೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಮಕ್ಕಳ ಕಲಿಕಾ ಹಬ್ಬ: 2026 ವು ಸಂಭ್ರಮ, ಸಡಗರದಿಂದ ನಡೆಯಿತು.
1 ರಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ ಮೂಲಭೂತ - ಸಾಕ್ಷರತೆ- ಸಂಖ್ಯಾಶಾಸ್ತ್ರ (ಎಫ್ ಎಲ್ ಎನ್ ) ಸಂಬಂಧಿಸಿದಂತೆ ಏರ್ಪಡಿಸಿದ್ದ ಕಲಿಕಾ ಹಬ್ಬದಲ್ಲಿ ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳುಳ್ಳ ಚಟುವಟಿಕೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚೇತನ್, ಮಕ್ಕಳು ಕೇಳುವ ಪ್ರಶ್ನೆಯು ಪ್ರಜ್ಞೆಯಾಗಲಿ”. ಕಲಿಕಾ ಹಬ್ಬವು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಸ್ಥಳೀಯರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಸಂಘಟಿಸಿರುವ ಮಕ್ಕಳ ಕಲಿಕಾ ಹಬ್ಬ ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳಲ್ಲಿ ಸಂತಸದಾಯಕ ಕಲಿಕೆಯ ಮೂಲಕ ಹೆಚ್ಚು ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದು ಚೇತನ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್ , ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಓದು, ಬರವಣಿಗೆ ಮತ್ತು ಗಣಿತದ ಮೂಲಭೂತ ಕೌಶಲಗಳನ್ನು ಬಲಪಡಿಸುವುದೇ ಎಫ್‌ಎಲ್‌ಎನ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದರು. ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆ ಗಟ್ಟಿಯಾದರೆ ಮಕ್ಕಳಿನ ಕಲಿವಿನ ಫಲ ವೃದ್ಧಿಯಾಗುತ್ತದೆ ಎಂದರು.
ಕಲಿಕಾ ಹಬ್ಬದಲ್ಲಿ ಮಕ್ಕಳ ಕಲಿಕಾ ಪ್ರೇರಣೆ ಕುರಿತು ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ , ವಿದ್ಯಾರ್ಥಿಗಳ ಕಲಿಕಾ ಮಟ್ಡವನ್ನು ಉತ್ತಮಪಡಿಸಲು ಶಾಲಾ ಶಿಕ್ಷಣಯು ಹಮ್ಮಿಕೊಂಡಿರುವ ವಿಶಿಷ್ಡ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಕ್ರಿಯಾಶೀಲ ಕಲಿಕಾ ಪ್ರೇರಣೆಯೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಹಕಾರಿಯಾಗಿವೆ .ಮಕ್ಕಳು ಕೇಳುವ ಪ್ರಶ್ನೆಯು ಪ್ರಜ್ಞೆಯಾಗಲಿ” ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷ ಎಸ್.ಎ.ಯೋಗೇಶ್ ಮಾತನಾಡಿ ಮಕ್ಕಳ ಕಲಿಕಾ ಹಬ್ಬವು ವಿಶಿಷ್ಟವಾದ ಮತ್ತು ಚಟುವಟಿಕೆಯಾಧಾರಿತ ಕೌಶಲ್ಯಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಬೆಳೆಸಲು ಮಕ್ಕಳ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂತಸದಾಯಕ ಕಲಿಕೆಯ ಜತೆಗೆ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದರು. ಕಲಿಕಾ ಹಬ್ಬದ ಉದ್ದೇಶ ತಿಳಿಸಿದ ಸಿ ಆರ್ ಪಿ ಕೆ.ಶಾಂತಕುಮಾರ್ , ಕ್ಲಸ್ಟರ್ ಹಂತದ ಶಾಲೆಗಳು ತಮ್ಮೊಳಗಿರುವ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು.
ಸರ್ಕಾರಿ ಪ್ರಾಥಮಿಕ ಶಾಲೆಯ 1 ರಿಂದ 5 ನೇ ತರಗತಿ ಮಕ್ಕಳಿಗೆ “ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ( ಎಫ್.ಎಲ್.ಎನ್):( F.L.N.: Foundation literacy and Numeracy) ಚಟುವಟಿಕೆಗಳ ಬಲವರ್ಧನೆಗೆ “ಕಲಿಕಾ ಹಬ್ಬ ” ನಡೆಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷೆ ಧರಣಿ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರೊಂದಿಗೆ ಪಾಲಕರು ಮತ್ತು ಸಮುದಾಯ ಒಟ್ಟಾಗಿ ಬೆಂಬಲಿಸಬೇಕೆಂದು ಮನವಿ ಮಾಡಿದರು. ಕಲಿಕಾ ಹಬ್ಬದ ವ್ಯವಸ್ಥೆ ಕುರಿತು ಶಾಲಾ ಮುಖ್ಯ ಶಿಕ್ಷಕಿ ತಾರಾಮಣಿ ಮಾಹಿತಿ ನೀಡಿದರು.
ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಕೆ.ಶಿವಶಂಕರ್, ಶಾಲಾ ಶಿಕ್ಷಕರಾದ ಎಚ್.ವಿ.ಲತಾಮಣಿ, ಎಸ್.ಸಿ.ಶ್ವೇತ, ಮಹದೇವಕುಮಾರ್, ನಿವೃತ್ತ ಶಿಕ್ಷಕಿ ಟಿ.ಎಸ್.ವಿನೋದ, ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರು,ಎಸ್ ಡಿ ಎಂ ಸಿ ಸದಸ್ಯರಾದ ಧನಂಜಯ, ಚೇತನ್ , ಮಂಜೇಶ , ಮಣಿ, ಜ್ಯೋತಿ, ಕೃಷಿಕರಾದ ಗುರುಪಾದಸ್ವಾಮಿ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಮಕ್ಕಳಿಂದ ಪ್ರತಿಭಾ ಪ್ರದರ್ಶನ; ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯಿಂದ ಬಂದಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಂದ ಶಿಕ್ಷಕರ ಜತೆ ಆಗಮಿಸಿದ್ದ ಮಕ್ಕಳು ತಾವು ಕಲಿತ್ತಿದ್ದ ವಿವಿಧ ಅಭ್ಯಾಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಹೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಲಿಕಾ ಹಬ್ಬದಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಕಾಗದದ ಟೋಪಿ ಧರಿಸಿ ಗಮನ ಸೆಳೆದರು.
“ಪ್ರಶ್ನೆಯು ಪ್ರಜ್ಞೆಯಾಗಲಿ” ಎಂಬ ಆಶಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ 13 ಸರ್ಕಾರಿ ಪ್ರಾಥಮಿಕ ಶಾಲೆಗಳ 1 ರಿಂದ 5 ನೇ ತರಗತಿಯ ಮಕ್ಕಳು ಭಾಗವಹಿಸಿದ್ದರು. ಶಾಲಾ ಅಂಗಳದಲ್ಲಿ ಇಡಲಾಗಿದ್ದ ಸೆಲ್ಪಿ ಕಾರ್ನರ್ ನಲ್ಲಿ ಮಕ್ಕಳು ಮತ್ತು ಪೋಷಕರು ಮುಗಿಬಿದ್ದು ತಮ್ಮ ಛಾಯಚಿತ್ರಗಳನ್ನು ತೆಗೆಸಿಕೊಳ್ಳುತ್ತಿದ್ದುದು ಗೋಚರಿಸಿತು.
ಶೈಕ್ಷಣಿಕ ವ್ಯವಸ್ಥೆ ಗಟ್ಟಿಯಾಗಬೇಕು; ಶೈಕ್ಷಣಿಕ ಪರಿಸರದ ಬೆಂಬಲ ವ್ಯವಸ್ಥೆ ಗಟ್ಟಿಯಾಗಬೇಕು ಹೀಗೆ ಹಲವು ಆಶಯಗಳೊಂದಿಗೆ ಶಾಲಾ ಶಿಕ್ಷಣ ಇಲಾಖೆ ಕ್ಲಸ್ಟರ್ ಮಟ್ಟದಲ್ಲಿ ಎಫ್.ಎಲ್.ಎನ್. ಕಲಿಕಾ ಹಬ್ಬವನ್ನು ಕ್ರಿಯಾತ್ಮಕವಾಗಿ ಮತ್ತು ಸೃಜನಾತ್ಮಕವಾಗಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಒಂದರಿಂದ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಆಯ್ದ ಮಕ್ಕಳಿಗೆ ಈ ಕಲಿಕಾ ಹಬ್ಬವನ್ನು ಕ್ಲಸ್ಟರ್ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಸಿ ಆರ್ ಪಿ ಕೆ.ಶಾಂತಕುಮಾರ್ ಮಾಹಿತಿ ನೀಡಿದರು.