ಕೊಡಗು ಜಿಲ್ಲೆಯಾದ್ಯಂತ ಅಂತರ ರಾಷ್ಟ್ರೀಯ 12ನೇ ಯೋಗ ದಿನಾಚರಣೆ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ: ಪಿ.ಕಲಾವತಿ
ಮಡಿಕೇರಿ ಜೂ 21:- ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಇವರ ಸಹಯೋಗದೊಂದಿಗೆ 'ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ವಿಷಯದಡಿ ನಗರದ ಕಾವೇರಿ ಹಾಲ್ನಲ್ಲಿ ಭಾನುವಾರ ನಡೆದ ಅಂತರರಾಷ್ಟ್ರೀಯ 12ನೇ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯ, ಆಯಸ್ಸು ಹೆಚ್ಚಾಗಲಿದೆ. ಇದರಿಂದ ಕ್ರಿಯಾಶೀಲತೆ ಮತ್ತು ಚಲನಶೀಲತೆಯಿಂದ ಬದುಕು ನಡೆಸಲು ಸಹಕಾರಿಯಾಗಲಿದೆ ಎಂದರು.
ಯೋಗ ದಿನಾಚರಣೆ ಒಂದು ದಿನಕ್ಕೆ ಸೀಮಿತಗೊಳಿಸುವುದರಿಂದ ಪ್ರತಿನಿತ್ಯ ಜೀವನದಲ್ಲಿ ಯೋಗ ಅಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಬೇಕು. ಪ್ರಸ್ತುತ ದಿನದಲ್ಲಿ ದೈಹಿಕ ಆರೋಗ್ಯ ಶಕ್ತಿ ಮತ್ತು ಫಿಟ್ನೆಸ್ ಹೆಚ್ಚಿಸಿಕೊಳ್ಳಲು ವ್ಯಾಯಾಮ ಶಾಲೆಗಳಿಗೆ ತೆರಳದೆ ಮನೆಯಲ್ಲಿಯೇ ನಿಯಮಿತವಾಗಿ ಯೋಗಾಭ್ಯಸ ಮಾಡುವುದರಿಂದ ರಕ್ತದೊತ್ತಡ, ಮಧುಮೇಹ ನಿಯಂತ್ರಣಕ್ಕೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.
"ವಯಸ್ಸಾಗುತ್ತಿದ್ದಂತೆ ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡಲು ಯೋಗವು ಅತ್ಯುತ್ತಮ ಮಾರ್ಗವಾಗಿದೆ ಎಂದರು.
ಈ ಬಾರಿಯ ಧ್ಯೇಯ ವಾಕ್ಯದಂತೆ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು" ಎಂದು ಕರೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಅವರು ಮಾತನಾಡಿ ಯೋಗ/ ವ್ಯಾಯಾಮ ಮಾಡುವುದರಿಂದ ಪ್ರತಿನಿತ್ಯ ಚಟುವಟಿಕೆಯಿಂದ ಇರಲು ಸಾಧ್ಯ. ಆ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮ ಮಾಡುವುದು ಅತ್ಯಗತ್ಯ ಎಂದರು.
ಅಂತರರಾಷ್ಟ್ರೀಯ 12ನೇ ಯೋಗ ದಿನಾಚರಣೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಹೀಗೆ ಎಲ್ಲರೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಯಶಸ್ಸುಗೊಳಿಸಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸನತ್ ಕುಮಾರ್ ಅವರು ಮಾತನಾಡಿ ಇಂದಿನ ಪೀಳಿಗೆಗೆ ಯೋಗ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು. ಯೋಗದ ಮಹತ್ವವನ್ನು ಎಲ್ಲರಿಗೂ ಪರಿಚಯ ಮಾಡಿಸಬೇಕು ಮತ್ತು ದಿನ ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದು ಹೇಳಿದರು.
ಯೋಗ ಶಿಕ್ಷಕರು ಸೂರ್ಯ ನಮಸ್ಕಾರ, ವೃಕ್ಷಾಸನ, ಪಾದಹಸ್ತಾಸನ, ಉದ್ರ್ವಾಸನ, ತಾಡಾಸನ, ಅರ್ಧ ಮತ್ಸೇಂದ್ರಾಸನ, ಭುಜಂಗಾಸನ, ಪವನಮುಕ್ತಾಸನ, ಭದ್ರಾಸನ, ತ್ರಿಕೋನಾಸನ, ಉಷ್ಟ್ರಾಸನ, ವಜ್ರಾಸನ, ಶಲಭಾಸನ, ಶಶಾಂಕಾಸನ, ಮಂಡೂಕಾಸನ, ವಕ್ರಾಸನ, ಮಕರಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಶವಾಸನ, ಕಪಾಲಭಾತಿ, ಶೀತಲಿ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನ, ನಾಡಿಶೋಧ ಪ್ರಾಣಾಯಾಮ ಹೀಗೆ ಹಲವು ರೀತಿಯ ಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ.ಎಸ್.ಹಾದಿಮನಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಯೋಗ ತರಬೇತುದಾರರಾದ ಮಹೇಶ್ ಕುಮಾರ್, ಕೌಶಿಕ್ ಆಯುಷ್, ನೀಮಾ ಸಂಸ್ಥೆಯ ಡಾ.ರಾಜಾರಾಮ್, ಸಹಾಯಕ ಆಡಳಿತ ಅಧಿಕಾರಿ ಕೆ.ಟಿ.ಕಾವೇರಪ್ಪ, ಶಾಲಾ ಶಿಕ್ಷಣ ಇಲಾಖೆಯ ತಾಲ್ಲೂಕು ದೈಹಿಕ ಶಿಕ್ಷಣ ಪರಿವಿಕ್ಷಕರಾರ ಬಾಲಚಂದ್ರ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಲಿಂಗಪ್ಪ, ಮಾರ್ನಿಂಗ್ ಸ್ಟಾರ್ ಯೋಗ ಸಂಸ್ಥೆಯ ಕವನ್, ಸ್ಕೌಟ್ ಗೈಡ್ ಶಿಕ್ಷಕಿ ದಮಯಂತಿ, ವೈದ್ಯಾಧಿಕಾರಿಗಳಾದ ಡಾ. ಪಿ.ಜಿ.ಅರುಣ್ ನಿರೂಪಿಸಿದರು, ಡಾ.ಪಲ್ಲವಿ ಸ್ವಾಗತಿಸಿದರು, ಡಾ.ಸರಸ್ವತಿ ವಂದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೊಡಗು ವೈದ್ಯಕೀಯ ಶಿಕ್ಷಣ, ಜಿಲ್ಲಾ ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಸಮಾಜ ಕಲ್ಯಾಣ, ಪದವಿ ಪೂರ್ವ ಶಿಕ್ಷಣ, ಎನ್ಎಸ್ಎಸ್ ಮತ್ತು ಎನ್ಸಿಸಿ ಘಟಕ, ನೆಹರು ಯುವ ಕೇಂದ್ರ, ಕೊಡಗು ಯುವ ಒಕ್ಕೂಟ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಯೋಗ ಭಾರತಿ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಶಿಕ್ಷಣ, ಆರ್ಟ್ ಆಪ್ ಲಿವಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್, ನೀಮಾ ಸಂಸ್ಥೆ ಹೀಗೆ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

