ನಾಪೋಕ್ಲಿನಲ್ಲಿ ನಾಲ್ಕು ನಾಡು ಆಟೋ ಚಾಲಕರಿಂದ ಅದ್ಧೂರಿಯಾಗಿ ನಡೆದ ಆಯುಧ ಪೂಜಾ ಮಹೋತ್ಸವ

ನಾಪೋಕ್ಲಿನಲ್ಲಿ ನಾಲ್ಕು ನಾಡು ಆಟೋ ಚಾಲಕರಿಂದ  ಅದ್ಧೂರಿಯಾಗಿ ನಡೆದ ಆಯುಧ ಪೂಜಾ ಮಹೋತ್ಸವ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು: ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಾಪೋಕ್ಲುವಿನಲ್ಲಿ ನಡೆದ 33ನೇ ವರ್ಷದ ಅದ್ದೂರಿ ಆಯುಧ ಪೂಜಾ ಮಹೋತ್ಸವವು ಅಲಂಕೃತ ವಾಹನಗಳ ಮೆರವಣಿಗೆ ಹಾಗೂ ರಸಮಂಜರಿ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

 ನಾಪೋಕ್ಲು ಪಟ್ಟದ ಮಾರುಕಟ್ಟೆ ಬಳಿ ಸಂಘದ ಅಧ್ಯಕ್ಷರಾದ ಟಿ.ಪಿ.ಸುಕುಮಾರ್ ಅವರ ಅದ್ಯಕ್ಷತೆಯಲ್ಲಿ ಆಯೋಜಿಸಲಾದ ಅದ್ದೂರಿ ಆಯುಧ ಪೂಜಾ ಮಹೋತ್ಸವ ಸಮಾರಂಭವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಚ್.ಎ.ಹಂಸ ಕೊಟ್ಟಮುಡಿ ಅವರು ಮಾತನಾಡಿ ನಾಲ್ಕು ನಾಡಿನಲ್ಲಿ ಆಯೋಜಿಸಿಕೊಂಡು ಬರುತ್ತಿರುವ ಆಯುಧಪೂಜೆ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು.ನಮ್ಮ ದೇಶದ,ರಾಜ್ಯದ,ಜಿಲ್ಲೆಯ ಸಂಸ್ಕೃತಿ, ಪರಂಪರೆಯನ್ನು ಬೆಳೆಸಬೇಕಾದರೆ ಇಂತಹ ಕಾರ್ಯಕ್ರಮಗಳು ಅವಶ್ಯ. ಕಾರ್ಯಕ್ರಮಗಳು ಇದೇ ರೀತಿ ಪ್ರತಿ ವರ್ಷವೂ ಆಯೋಜಿಸಬೇಕು ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಮಾತನಾಡಿ ಆಯುಧ ಪೂಜೆ ಗತ ಕಾಲದಿಂದ ಆಯೋಜಿಸಿಕೊಂಡು ಬರುತ್ತಿರುವ ಹಬ್ಬವಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕೆಂದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾಫಿ ಬೆಳೆಗಾರ ರಮೇಶ್ ಮುದ್ದಯ್ಯ ಮಾತನಾಡಿ ಭಾರತ ಕೃಷಿ ಪ್ರಧಾನವಾದ ದೇಶ, ನಮ್ಮ ರಕ್ಷಣೆಗೆ ಆಯುಧ ಬೇಕು, ಕೃಷಿ ಚಟುವಟಿಕೆ, ಕಾರ್ಖಾನೆಗಳಿಗೆ ಯಂತ್ರೋಪಕರಣಗಳು ಬೇಕು. ನಮಿಗೆ ಸಂಚರಿಸಲು ವಾಹನಗಳು ಬೇಕು ಇದಕ್ಕೆಲ್ಲ ಸಾಮೂಹಿಕವಾಗಿ ಪೂಜೆ ನಡೆಸಿ ಭಕ್ತಿ ಪೂರ್ವಕವಾಗಿ ನಮ್ಮ ರಕ್ಷಣೆಗಾಗಿ ಬೇಡಿಕೊಳ್ಳುವುದೇ ಆಯುಧ ಪೂಜೆ ಯಾಗಿದೆ. ಸಮಾಜದಲ್ಲಿ ಎಲ್ಲರೂ ಶ್ರೀಮಂತರಿಲ್ಲ, ಏನಾದರೂ ಒಂದು ವೃತ್ತಿ ಮಾಡಿ ಮನೋಸಹಜವಾಗಿ ಬದುಕುವುದೇ ಜೀವನ ಎಲ್ಲರೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಹಬಾಳ್ವೆಯಿಂದ ಬಾಳಬೇಕಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಉಮಾ ಪ್ರಭು, ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ಬಿಲ್ಲವ ಸಮಾಜದ ಅಧ್ಯಕ್ಷ ಪ್ರತೀಪ್, ಪಂಚಾಯಿತಿ ಸದಸ್ಯ ಇಸ್ಮಾಯಿಲ್,ಪಾರಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ,ಸಂಘದ ಮಾಜಿ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಆಟೋ ಚಾಲಕರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

 ಕಾರ್ಯಕ್ರಮದ ಅಂಗವಾಗಿ ಹಳೇ ತಾಲೂಕು ಆವರಣದಿಂದ ನಾಪೋಕ್ಲು ಪಟ್ಟಣದ ಮುಖ್ಯಬೀದಿಗಳಲ್ಲಿ ಅಲಂಕೃತ ವಾಹನಗಳ ಭವ್ಯ ಮೆರವಣಿಗೆ ನಡೆಯಿತು.ಬಳಿಕ ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಸೈಕಲ್, ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರ ಸೇರಿದಂತೆ ಎಲ್ಲ ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ನೆರವೇರಿಸಲಾಯಿತು. ಅಲಂಕೃತ ಮೆರವಣಿಗೆಯಲ್ಲಿ ಪಾಲ್ಗೊಂಡ ವಿವಿಧ ವಾಹನ ವಿಭಾಗಗಳಲ್ಲಿ ಸ್ಪರ್ಧಿಸಿದ ವಿಜೇತರಾದ ವಾಹನದ ಮಾಲೀಕರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಸಂಘದ ವತಿಯಿಂದ ವಿತರಿಸಲಾಯಿತು.

ಸಮಾರಂಭದ ಪ್ರಯುಕ್ತ ಆಯೋಜಿಸಲಾದ ಲಕ್ಕಿ ಡಿಫ್ ನಲ್ಲಿ ವಿಜೇತರಾದವರಿಗೆ ಪ್ರಥಮ 25ಸಾವಿರ,ದ್ವಿತೀಯ 15ಸಾವಿರ ಹಾಗೂ ತೃತೀಯ 10ಸಾವಿರ ನಗದು ಬಹುಮಾನಗಳನ್ನು ಗಣ್ಯರು ವಿತರಿಸಿದರು. ಕಾರ್ಯಕ್ರಮದಲ್ಲಿ ಭದ್ರಾವತಿ ಬ್ರದರ್ಸ್ ಸೌಂಡ್ಸ್ ಅಂಡ್ ಲೈಟ್ ಇವೆಂಟ್ಸ್ ಇವರ ವತಿಯಿಂದ ನಡೆದ ನೃತ್ಯ, ಹಾಡು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ನೋಡುಗರನ್ನು ರಂಜಿಸಿತು.

ಈ ಸಂದರ್ಭ ಕಾರ್ಯಕ್ರಮದಲ್ಲಿ ರಾಜ್ಯಸರ್ಕಾರದ ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾಉಪಾಧ್ಯಕ್ಷ ಬೊಳ್ಳಂಡ ಗಿರೀಶ್,ಕೆಡಿಪಿ ಸದಸ್ಯ ಕಲಿಯಂಡ ಕೌಶಿ,ಜಯ ಕಾಫಿ ಕ್ಯೂರಿಂಗ್ ವಕ್ರ್ಸ್ ನ ಮಾಲೀಕ ಮಂಡಿರ ಕಿಶೋರ್ ತಮ್ಮಯ್ಯ, ಚರ್ಮಂದಂಡ ಗಣಪತಿ, ಉದ್ಯಮಿ ಕಂಗಣ್ಣ ಅರುಣ್ ಮಂದಣ್ಣ, ಮನ್ಸೂರ್ ಆಲಿ, ಚೀಯಕಪೂವಂಡ ಸತೀಶ್ ದೇವಯ್ಯ, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್ ವಸಂತ, ಸಂಘದ ಗೌರವಾಧ್ಯಕ್ಷ ಅಬ್ದುಲ್ ರಜಾಕ್, ಉಪಾಧ್ಯಕ್ಷರು ರಾಶಿದ್, ಕಾರ್ಯದರ್ಶಿ ಸತೀಶ್, ಖಜಾಂಚಿ ಚೇತನ್, ಮಿಥುನ್, ದೀಪು, ಸೋಮಣ್ಣ, ಮುಸ್ತಫಾ,ಆಶಿಮ್, ಸಮದ್,ಆನಂದ ಸೇರಿದಂತೆ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಎಲ್ಲಾ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಬಿದ್ದಾಟಂಡ ಮಮತ ನಿರೂಪಿಸಿದರು. ಸಿ. ಎಂ. ಉಸ್ಮಾನ್ ಸ್ವಾಗತಿಸಿ, ಟಿ. ಪಿ. ಸುಕುಮಾರ್ ವಂದಿಸಿದರು.