ತರಕಾರಿ ಮಾರಾಟ ಮಾಡಿ ದಾನಕ್ಕೆ ಹೆಸರಾದ ದಾನಜ್ಜಿ ಭೀಕರ ಹತ್ಯೆ; ಅಣ್ಣನ ಮಕ್ಕಳೇ ಆರೋಪಿಗಳು!
ಬಾಗಲಕೋಟೆ, ಜ.15: ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮದಲ್ಲಿ ದಾನಧರ್ಮಕ್ಕೆ ಹೆಸರಾದ 80 ವರ್ಷದ ದಾನಜ್ಜಿ ಅಲಿಯಾಸ್ ಚಂದ್ರವ್ವ ನೀಲಗಿ ಅವರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣನ ಮಕ್ಕಳೇ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. 11 ಎಕರೆ ಜಮೀನಿನ ಹಂಚಿಕೆ ವಿಚಾರವೇ ಈ ಅಮಾನವೀಯ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವನಪೂರ್ತಿ ತರಕಾರಿ ಮಾರಾಟದಿಂದಲೇ ಜೀವನ ಸಾಗಿಸಿದ್ದ ದಾನಜ್ಜಿ, ಕಳೆದ ಸುಮಾರು ಆರು ದಶಕಗಳಿಂದ ತೇರದಾಳದ ಪ್ರಭುಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಉಳಿಸಿದ ಹಣವನ್ನು ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟಿದ್ದ ಅವರು, 2022ರಲ್ಲಿ ದೇವಸ್ಥಾನದ ಗರ್ಭಗುಡಿಗೆ ಸುಮಾರು 20 ಕೆ.ಜಿ ತೂಕದ, 16 ಲಕ್ಷ ರೂ. ಮೌಲ್ಯದ ಬೆಳ್ಳಿ ಬಾಗಿಲು ದಾನ ಮಾಡಿದ್ದರು. ಜೊತೆಗೆ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನಕ್ಕೆ ಒಂದು ಕೊಠಡಿಯನ್ನೂ ನಿರ್ಮಿಸಿ ಕೊಟ್ಟಿದ್ದರು. ಈ ಸೇವಾಭಾವದಿಂದಲೇ ಅವರು ‘ದಾನಜ್ಜಿ’ ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದರು.
ಪೊಲೀಸರ ತನಿಖೆ ಪ್ರಕಾರ, ದಾನಜ್ಜಿ ಮತ್ತು ಅವರ ಅಣ್ಣನ ಮಕ್ಕಳ ನಡುವೆ ಆಸ್ತಿಯ ವಿಚಾರವಾಗಿ ದೀರ್ಘಕಾಲದಿಂದ ವೈಮನಸ್ಸು ಇತ್ತು. ಜನವರಿ 13ರಂದು ಭೂಮಿಯ ಸರ್ವೆ ಕಾರ್ಯ ನಡೆಯುತ್ತಿದ್ದ ವೇಳೆ, ಘಟಪ್ರಭಾ ಕಾಲುವೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ದಾನಜ್ಜಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಲು ಯತ್ನಿಸಲಾಗಿದೆ. ನಂತರ ಅವರನ್ನು ರಕ್ಷಿಸಿದಂತೆ ತೋರಿಸಿ, ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಕೊಲೆ ಬಳಿಕ ಶವವನ್ನು ಆತುರವಾಗಿ ಅಂತ್ಯಸಂಸ್ಕಾರ ಮಾಡಲು ಆರೋಪಿಗಳು ಯತ್ನಿಸಿದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಅನುಮಾನ ಮೂಡಿತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಾಗಿದೆ.
ಈ ಸಂಬಂಧ ರಬಕವಿಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.