ವಿರಾಜಪೇಟೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಹೆಜ್ಜೆ: "ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟ" ಉದ್ಘಾಟನೆ

Jul 4, 2026 - 14:32
 0  242
ವಿರಾಜಪೇಟೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಹೆಜ್ಜೆ: "ಶ್ರೀ ಈಶ್ವರ ಇಗ್ಗುತಪ್ಪ ಪೊಮ್ಮಕ್ಕಡ ಕೂಟ" ಉದ್ಘಾಟನೆ

ವಿರಾಜಪೇಟೆ: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣದ ಉದ್ದೇಶದೊಂದಿಗೆ ವೀರಾಜಪೇಟೆಯ ಮಹಿಳೆಯರು ಒಗ್ಗೂಡಿ"ಶ್ರೀ ಈಶ್ವರ ಇಗ್ಗುತಪ್ಪ" ಹೆಸರಿನ ಪೊಮ್ಮಕ್ಕಡ ಕೂಟವನ್ನು ಉಳಿತಾಯ ಯೋಜನೆಯಡಿಯಲ್ಲಿ ಪ್ರಾರಂಭಿಸಿದ್ದಾರೆ. ಈ ಕೂಟಕ್ಕೆ ಇಲ್ಲಿಯವರೆಗೆ 87 ಮಂದಿ ಮಹಿಳೆಯರು ಸದಸ್ಯತ್ವ ಪಡೆದುಕೊಂಡು, ಮಹಿಳಾ ಶಕ್ತಿಯ ಮಾದರಿಯಾಗಿದ್ದಾರೆ.

ಉದ್ಘಾಟನಾ ಸಮಾರಂಭ:

ವೀರಾಜಪೇಟೆ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೊಡಂದೆರ ಬಾಂಡ್ ಗಣಪತಿ ಹಾಗೂ ಬ್ಯಾಂಕ್ ವ್ಯವಸ್ಥಾಪಕರಾದ ಕೇಳಪಂಡ ಲತಾ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಗಣಪತಿ ಅವರು, "ಮಹಿಳೆಯರು ಒಗ್ಗೂಡಿ ಉಳಿತಾಯ ಮಾಡಿದರೆ ಕುಟುಂಬದ ಆರ್ಥಿಕ ಭದ್ರತೆಯ ಜೊತೆಗೆ ಸಮಾಜದ ಪ್ರಗತಿಯೂ ಸಾಧ್ಯ. ಜಿಲ್ಲಾ ಸಹಕಾರ ಬ್ಯಾಂಕ್ ಯಾವಾಗಲೂ ಮಹಿಳಾ ಸಬಲೀಕರಣಕ್ಕೆ ಸಾಥ್ ನೀಡುತ್ತದೆ" ಎಂದು ಹೇಳಿದರು.

   ಬ್ಯಾಂಕ್ ವ್ಯವಸ್ಥಾಪಕಿ ಕೇಳಪಂಡ ಲತಾ ಅವರು, ಮಾತನಾಡಿ, ಮಹಿಳೆಯರಿಗಾಗಿಯೇ ಇರುವ ವಿವಿಧ ಸಾಲ ಸೌಲಭ್ಯಗಳು, ಸ್ವಸಹಾಯ ಗುಂಪುಗಳ ಸೌಲಭ್ಯ, ಉಳಿತಾಯ ಯೋಜನೆಗಳು ಮತ್ತು ಸ್ವಾವಲಂಬಿ ಬದುಕಿಗೆ ಬ್ಯಾಂಕ್ ನೀಡುವ ಎಲ್ಲಾ ಸೇವೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಕೂಟವು ಮಹಿಳಾ ಬ್ಯಾಂಕ್ ಆರಂಭಿಸಿದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪದಾಧಿಕಾರಿಗಳ ಆಯ್ಕೆ:

  ಅಧ್ಯಕ್ಷೆಯಾಗಿ ಮನೆಯಪಂಡ ಕಾಂತಿ ಸತೀಶ್, ಉಪಾಧ್ಯಕ್ಷೆ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಕಾರ್ಯದರ್ಶಿ ಚೇಂದಂಡ ಮೀನಾ, ಸಹ ಕಾರ್ಯದರ್ಶಿ ಪಟ್ರಪಂಡ ಗೀತಾ, ಖಜಾಂಚಿ ಕುಂಞರ ಚಿತ್ರ, ಸಹ ಖಜಾಂಚಿ ಕಾಣತಂಡ ಬೀನಾ ಅವರನ್ನು ಸರ್ವಾನುಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು:

ವಿಶೇಷ ಆಕರ್ಷಣೆ:

ಮೈಸೂರು ನಗರದ ಪ್ರತಿಷ್ಠಿತ "ನೆಕ್ಟರ್ ಫ್ರೆಷ್" ಕಂಪನಿಯ ಮಾಲೀಕರಾದ ಖ್ಯಾತ ಉದ್ಯಮಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕುಪ್ಪಂಡ ಛಾಯ ನಂಜಪ್ಪ ರಾಜಪ್ಪನವರು ಈ ಕೂಟದ ಸದಸ್ಯತ್ವ ಪಡೆದುಕೊಂಡಿರುವುದು ಕೂಟಕ್ಕೆ ಮತ್ತಷ್ಟು ಗೌರವ ತಂದಿದೆ. ಅವರು ಕೂಟದ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಲಿದ್ದಾರೆ.

  ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ ಕೂಟದ ದ್ಯೇಯೋದ್ದೇಶಗಳನ್ನು ವಿವರಿಸಿದರು. "ಮಹಿಳೆಯರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಕೂಟ ಕೆಲಸ ಮಾಡಲಿದೆ" ಎಂದು ತಿಳಿಸಿದರಲ್ಲದೆ, "ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ನಾವು ಪಣ ತೊಟ್ಟಿದ್ದೇವೆ. ಉಳಿತಾಯದ ಜೊತೆಗೆ ಸ್ವಉದ್ಯೋಗ, ಕೌಶಲ್ಯ ತರಬೇತಿ, ಮಹಿಳಾ ಆರೋಗ್ಯ ಶಿಬಿರಗಳನ್ನೂ ಆಯೋಜಿಸಲಿದ್ದೇವೆ" ಎಂದು ಭರವಸೆ ನೀಡಿದರು. 

   ಕಾರ್ಯದರ್ಶಿ ಚೇಂದಡ ಮೀನಾ ಅವರು ಕೂಟದ ಪ್ರಾರಂಭದಿಂದ ಇಲ್ಲಿಯವರೆಗಿನ ವರದಿ ಮಂಡಿಸಿದರು.  ಸಹ ಖಜಾಂಚಿ ಕಾಣತಂಡ ಬೀನಾ, ಖಜಾಂಚಿ ಕುಂಞರ ಚಿತ್ರ, ಮಾಚಪಂಡ ತುಳಸಿ ಇವರು ಕಾರ್ಯಕ್ರಮ ನಿರ್ವಹಣೆಗೈದರು.ಈ ಸಂದರ್ಭ ನೂತನ ಪೊಮ್ಮಕ್ಕಡ ಕೂಟದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0