ಮೈಸೂರು ದಸರಾದಲ್ಲಿ ನಡುಗಿಸಿದ ಪೈಶಾಚಿಕ ಕೃತ್ಯ: ಬಲೂನ್ ಮಾರಾಟಕ್ಕಾಗಿಯೇ ಬಂದಿದ್ದ ಬಾಲಕಿಯ ಶವ ಪತ್ತೆ; ಅತ್ಯಾಚಾರ ಶಂಕೆ

Oct 9, 2025 - 20:22
Oct 9, 2025 - 20:22
 0  1.2k
ಮೈಸೂರು ದಸರಾದಲ್ಲಿ ನಡುಗಿಸಿದ ಪೈಶಾಚಿಕ ಕೃತ್ಯ: ಬಲೂನ್ ಮಾರಾಟಕ್ಕಾಗಿಯೇ ಬಂದಿದ್ದ ಬಾಲಕಿಯ ಶವ ಪತ್ತೆ; ಅತ್ಯಾಚಾರ ಶಂಕೆ
Photo credit: TV09

ಮೈಸೂರು,ಅ.09 : ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಬಲೂನ್ ಮಾರಾಟಕ್ಕಾಗಿ ಬಂದಿದ್ದ ಹತ್ತು ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಲಬುರಗಿ ಜಿಲ್ಲೆಯ ಹಕ್ಕಿಪಿಕ್ಕಿ ಜನಾಂಗದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಈ ಬಾರಿ ದಸರಾ ಪ್ರದರ್ಶನ ಸಂದರ್ಭ ಬಲೂನ್ ಹಾಗೂ ಆಟಿಕೆ ಮಾರಾಟಕ್ಕಾಗಿ ಮೈಸೂರಿಗೆ ಆಗಮಿಸಿದ್ದವು. ಇವರು ದೊಡ್ಡಕೆರೆ ಮೈದಾನದ ಸುತ್ತಮುತ್ತ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದರು. ಬುಧವಾರ ರಾತ್ರಿ ವ್ಯಾಪಾರ ಮುಗಿಸಿ ತಂದೆ–ತಾಯಿಯೊಂದಿಗೆ ನಿದ್ರೆಗೆ ಜಾರಿದ್ದ ಬಾಲಕಿ, ಗುರುವಾರ ಬೆಳಗ್ಗೆ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಟೆಂಟ್‌ ನಿಂದ ಸುಮಾರು 50 ಮೀಟರ್ ದೂರದಲ್ಲಿನ ಮಣ್ಣಿನ ರಾಶಿಯಲ್ಲಿ ಶವ ಪತ್ತೆಯಾಯಿತು.

ಪತ್ತೆಯಾದ ಶವದ ಮೇಲಿಂದ ಬಟ್ಟೆ ಇಲ್ಲದಿರುವುದರಿಂದ ಅತ್ಯಾಚಾರ ಬಳಿಕ ಕೊಲೆ ನಡೆದಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯ ಹತ್ಯೆಯೂ ನಡೆದಿದ್ದು, ಒಂದೇ ಸ್ಥಳದಲ್ಲಿ ಅಲ್ಪಾವಧಿಯಲ್ಲಿ ಎರಡು ಕೊಲೆಗಳು ನಡೆದಿರುವುದು ಆತಂಕ ಉಂಟುಮಾಡಿದೆ.

ಘಟನೆಯ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಶ್ವಾನ ದಳ ಹಾಗೂ ಫೊರೆನ್ಸಿಕ್ ತಂಡದ ಸಹಾಯದಿಂದ ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸಿದ ನಂತರ ಆರೋಪಿಯ ಗುರುತು ಪತ್ತೆಯಾಗಿದೆ.

ಸಿದ್ಧಲಿಂಗಪುರ ನಿವಾಸಿ ಕಾರ್ತಿಕ್ (31) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಹಿಂದೆ ಒಂದು ಪ್ರಕರಣದಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಬಳಿಕ ಊರಿಗೆ ಹೋಗದೆ ಅಲೆಯುತ್ತಿದ್ದನೆಂದು ಮೂಲಗಳಿಂದ ತಿಳಿದುಬಂದಿದೆ.

What's Your Reaction?

Like Like 2
Dislike Dislike 0
Love Love 0
Funny Funny 1
Angry Angry 1
Sad Sad 3
Wow Wow 0