Kodagu

ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ಸುರಕ್ಷಿತವಾಗಿ ಹೊರಬಂತು

admincoorgdaily

ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ಸುರಕ್ಷಿತವಾಗಿ ಹೊರಬಂತು

ಸಿದ್ದಾಪುರ: ಪೊನ್ನಂಪೇಟೆ ತಾಲೂಕಿನ ಕನ್ನಂಬಾಡಿ ಗ್ರಾಮದ ಖಾಸಗಿ ತೋಟದ ಕೆರೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡು 24 ಗಂಟೆಗೂ ಹೆಚ್ಚು ಕಾಲ ನರಳುತ್ತಿದ್ದ ಕಾಡಾನೆ ಕೊನೆಗೂ ಸುರಕ್ಷಿತವಾಗಿ ಕೆಸರಿನಿಂದ ಹೊರಬಂದು ಕಾಡಿನತ್ತ ತೆರಳಿದೆ.

 ಆರಂಭದಲ್ಲಿ ರಕ್ಷಣಾ ಕಾರ್ಯ ವಿಳಂಬವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರೂ, ಬಳಿಕ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಆನೆಯ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಿರುಬನಾಥ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸ್ಥಳೀಯ ಆರ್‌ಎಫ್‌ಒ ಗಂಗಾಧರ್, ವನ್ಯಜೀವಿ ಆರ್‌ಎಫ್‌ಒ ದೇವರಾಜ್ ಹಾಗೂ ಡಿಆರ್‌ಎಫ್‌ಒ ಪ್ರಶಾಂತ್ ಅವರು ಸ್ಥಳದಲ್ಲೇ ಇದ್ದು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದರು.

 ವನ್ಯಜೀವಿ ತಜ್ಞ ಡಾ. ಮುಜೀಬ್ ಅವರು ಆನೆಯ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಪ್ರಾಣಿಗೆ ಯಾವುದೇ ಗಂಭೀರ ಗಾಯ ಅಥವಾ ತುರ್ತು ಚಿಕಿತ್ಸೆಯ ಅಗತ್ಯ ಕಂಡುಬರದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಮುಂದಾಗದೆ ನಿರಂತರ ನಿಗಾದಲ್ಲಿ ಇಡಲು ಅಧಿಕಾರಿಗಳು ತೀರ್ಮಾನಿಸಿದರು.

ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಕಾಡು ಪ್ರಾಣಿಗಳಲ್ಲಿ ವಯಸ್ಸು, ಜೀರ್ಣಾಂಗದ ತೊಂದರೆ ಅಥವಾ ಹಸಿವಿನಂತಹ ಕಾರಣಗಳಿಂದ ಕೆಲವೊಮ್ಮೆ ಒಂದೆರಡು ದಿನಗಳ ಕಾಲ ಸುಸ್ತಾಗಿ ಒಂದೇ ಸ್ಥಳದಲ್ಲಿ ಉಳಿಯುವುದು ಸಹಜ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಬಳಿಕ ಅವು ಸ್ವಾಭಾವಿಕವಾಗಿ ತಮ್ಮ ವಾಸಸ್ಥಳದತ್ತ ತೆರಳುತ್ತವೆ ಎಂದು ತಿಳಿಸಿದರು.

ಇದೇ ರೀತಿ, ಕೆಲ ಸಮಯದ ಬಳಿಕ ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ಸ್ವತಃ ಹೊರಬಂದು ಸುರಕ್ಷಿತವಾಗಿ ಕಾಡಿನತ್ತ ತೆರಳಿದ್ದು, ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆನೆಯ ಚಲನವಲನಗಳ ಮೇಲೆ ಇನ್ನೂ ಕೆಲಕಾಲ ನಿಗಾ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.