ದೆಹಲಿಯಿಂದ ಕೊಡಗಿನ ಸಂಬಂಧಿಕರ ಮನೆಗೆ ಬಂದ ಮಹಿಳೆ ತೋಟ ನೋಡುತ್ತಿದ್ದಾಗ ಆನೆ ದಾಳಿಗೆ ಬಲಿ

Jun 5, 2026 - 19:25
 0  2.3k
ದೆಹಲಿಯಿಂದ ಕೊಡಗಿನ ಸಂಬಂಧಿಕರ ಮನೆಗೆ ಬಂದ ಮಹಿಳೆ ತೋಟ ನೋಡುತ್ತಿದ್ದಾಗ ಆನೆ ದಾಳಿಗೆ ಬಲಿ

ಗೋಣಿಕೊಪ್ಪ; ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಸಮೀಪದ ಕೊಣನಕಟ್ಟೆ ಗ್ರಾಮದ ತೋಟವೊಂದರಲ್ಲಿ ಶುಕ್ರವಾರ ನಡೆದ ಭೀಕರ ಆನೆ ದಾಳಿಗೆ ಕೇಂದ್ರ ಸರಕಾರದ ಹಿರಿಯ ಐಪಿಎಸ್ (IPS) ಅಧಿಕಾರಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಅಚ್ಚಯ್ಯ (51) ಅವರು ಬಲಿಯಾಗಿದ್ದಾರೆ.

ಸಂಧ್ಯಾ ಅಚ್ಚಯ್ಯ ಅವರು ಸಂಬಂಧಿಕರ ಮನೆಯಲ್ಲಿ ನಡೆದಿದ್ದ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಅವರು ಇತರ ನಾಲ್ವರೊಂದಿಗೆ ಸೇರಿ ಒಟ್ಟು ಐದು ಜನರ ಗುಂಪಿನಲ್ಲಿ ಸ್ಥಳೀಯ ತೋಟವೊಂದಕ್ಕೆ ಭೇಟಿ ನೀಡಿದ್ದರು.

 ಈ ವೇಳೆ ತೋಟದಲ್ಲಿದ್ದ ಒಂಟಿ ಆನೆಯೊಂದು ಏಕಾಏಕಿ ಇವರ ಗುಂಪಿನತ್ತ ನುಗ್ಗಿ ಭೀಕರವಾಗಿ ದಾಳಿ ನಡೆಸಿದೆ. ಆನೆ ತಾವಿದ್ದ ಜಾಗಕ್ಕೆ ನುಗ್ಗುತ್ತಿದ್ದಂತೆ ಆತಂಕಗೊಂಡ ಉಳಿದ ನಾಲ್ವರು ಅಲ್ಲಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಸಂಧ್ಯಾ ಅಚ್ಚಯ್ಯ ಅವರು ಆನೆಯ ಹಿಡಿತಕ್ಕೆ ಸಿಲುಕಿಕೊಂಡಿದ್ದಾರೆ. ಆನೆಯ ಭೀಕರ ದಾಳಿಯಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಯ ಬೆನ್ನಲ್ಲೇ ತೀವ್ರವಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಡಗು ಮೂಲದ ಅಚ್ಚಯ್ಯ; ದಕ್ಷಿಣ ಕೊಡಗಿನ ಪರಕಟಕೇರಿ ಗ್ರಾಮದವರಾದ ಸುನಿಲ್ ಅಚ್ಚಯ್ಯ ಅವರು IPS ಅಧಿಕಾರಿಯಾಗಿದ್ದು ದೆಹಲಿಯಲ್ಲಿ ಕೇಂದ್ರ ಸರಕಾರ ಅಧೀನದ ಸಂಸ್ಥೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುನಿಲ್ ಅವರು ಅಚ್ಚಯ್ಯರವರ ಪುತ್ರರಾಗಿದ್ದು ತಾಯಿ ಬೆಲ್ಲ(ತಾಮನೆ ಅಮ್ಮಣಕುಟ್ಟಂಡ), ಪತ್ನಿ ಸಂಧ್ಯಾ (ತಾಮನೆ ಮಂಡೇಪಂಡ), ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ನೆಲೆಸಿದ್ದರು.

What's Your Reaction?

Like Like 2
Dislike Dislike 1
Love Love 0
Funny Funny 0
Angry Angry 0
Sad Sad 6
Wow Wow 0