ಮದ್ಯದ ನಶೆಯಲ್ಲಿ ತಮಾಷೆ ಮಾಡಲು ಹೋಗಿ ಯುವಕ ಅಕಸ್ಮಿಕ ಸಾವು

Jan 1, 2026 - 12:08
 0  2.5k
ಮದ್ಯದ ನಶೆಯಲ್ಲಿ ತಮಾಷೆ ಮಾಡಲು ಹೋಗಿ ಯುವಕ ಅಕಸ್ಮಿಕ ಸಾವು
Photo credit: TV09 (ಮೃತ ವಿಜಯ್ ಕುಮಾರ್)

ನೆಲಮಂಗಲ, ಡಿ.31: ಮದ್ಯದ ನಶೆಯಲ್ಲಿ ತಾಯಿಯನ್ನು ತಮಾಷೆಗೆ ಹೆದರಿಸಲು ಹೋಗಿ ನೇಣಿನ ಕುಣಿಕೆಗೆ ಸಿಲುಕಿ ಯುವಕನೊಬ್ಬ ಅಕಸ್ಮಿಕವಾಗಿ ಮೃತಪಟ್ಟ ಘಟನೆ ಪಟ್ಟಣದ ರೋಹಿತ್ ನಗರದಲ್ಲಿ ನಡೆದಿದೆ.

ವಿಜಯಕುಮಾರ್ (28) ಮೃತ ಯುವಕ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ವಿಜಯಕುಮಾರ್, ಮಂಗಳವಾರ ಸಂಜೆ ಮದ್ಯ ಸೇವಿಸಿ ಮನೆಗೆ ಬಂದ ಬಳಿಕ ತಾಯಿಯ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ಹಣ ನೀಡಲು ತಾಯಿ ನಿರಾಕರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ, ತಮಾಷೆಯಾಗಿ ನೇಣು ಹಾಕುವಂತೆ ನಟಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಅಕಸ್ಮಿಕವಾಗಿ ನೇಣಿನ ಕುಣಿಕೆಗೆ ಸಿಲುಕಿ ಆತ ಮೃತಪಟ್ಟಿದ್ದಾನೆ.

ರಾತ್ರಿ ಸುಮಾರು 8 ಗಂಟೆಗೆ ಘಟನೆ ನಡೆದಿದ್ದು, ಕುಟುಂಬಸ್ಥರು ಗಮನಿಸುವಷ್ಟರಲ್ಲಿ ಯುವಕನ ಪ್ರಾಣ ಹೋಗಿದೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿದೆ.

ಕುಟುಂಬಸ್ಥರ ಪ್ರಕಾರ, ವಿಜಯಕುಮಾರ್ ಹಿಂದೆಯೂ ಇದೇ ರೀತಿಯಲ್ಲಿ ಸಾವಿನ ವಿಚಾರದಲ್ಲಿ ತಮಾಷೆ ಮಾಡುತ್ತಿದ್ದ. ಈ ಚಾಳಿಯನ್ನು ಬಿಡುವಂತೆ ತಾಯಿ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಆತ ನಿರ್ಲಕ್ಷ್ಯ ವಹಿಸಿದ್ದಾನೆ. ಮಗನಿಗೆ ಮದುವೆ ಮಾಡಬೇಕೆಂದು ಕನಸು ಕಂಡಿದ್ದ ಕುಟುಂಬ, ಈ ದುರ್ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 7
Wow Wow 1