ಎ.ಕೆ ಸುಬ್ಬಯ್ಯ-ಪೊನ್ನಮ್ಮ ಸುಬ್ಬಯ್ಯ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಣೆ: ಶಾಸಕ ಎಎಸ್ ಪೊನ್ನಣ್ಣ ಅವರ ಕಾರ್ಯವೈಖರಿಯ ಬಗ್ಗೆ ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತಪಡಿಸಿದ ಗಣ್ಯರು

ಎ.ಕೆ ಸುಬ್ಬಯ್ಯ-ಪೊನ್ನಮ್ಮ ಸುಬ್ಬಯ್ಯ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಣೆ:  ಶಾಸಕ ಎಎಸ್ ಪೊನ್ನಣ್ಣ ಅವರ ಕಾರ್ಯವೈಖರಿಯ ಬಗ್ಗೆ ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತಪಡಿಸಿದ ಗಣ್ಯರು

ವಿರಾಜಪೇಟೆ:ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ಕಳೆದ ಹಲವು ವರ್ಷಗಳಿಂದ ಪ್ರತಿಭಾವಂತ ಬಡ ವಿದ್ಯಾರ್ಥಿನಿಯರಿಗೆ, ಎ.ಕೆ ಸುಬ್ಬಯ್ಯ-ಪೊನ್ನಮ್ಮ ಸುಬ್ಬಯ್ಯ ದತ್ತಿ ನಿಧಿ ಹಾಗೂ ಚಾರಿಟೇಬಲ್ ಟ್ರಸ್ಟ್ ಮೂಲಕ ನೀಡುತ್ತಿರುವ ವಿದ್ಯಾರ್ಥಿ ವೇತನ ವಿತರಣೆಯು, ಇಂದು ಶಾಸಕರ ವಿರಾಜಪೇಟೆ ನಿವಾಸದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಈ ಸಾಲಿನ ವಿದ್ಯಾರ್ಥಿ ವೇತನ ಪಡೆಯಲು ನೂರಾರು ಅರ್ಜಿಗಳು ಬಂದಿದ್ದು, ಉನ್ನತ ಮಟ್ಟದ ಆಯ್ಕೆ ಸಮಿತಿಯಿಂದ ಪುರಸ್ಕೃತಗೊಂಡ ಅರ್ಹ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿನಿಯರು ಮುಂದಿನ 3 ವರ್ಷದ ವಿದ್ಯಾಭ್ಯಾಸಕ್ಕೆ ತಲ ₹ 10000 ದಂತೆ, ಪ್ರತಿ ವರ್ಷ ಆರ್ಥಿಕ ನೆರವು ಪಡೆಯಲಿದ್ದಾರೆ ಎಂದು ಮಾನ್ಯ ಶಾಸಕರು ತಿಳಿಸಿದರು. ವೇದಿಕೆಯಲ್ಲಿ ಅರಮೇರಿ ಮಠದ ಶ್ರೀ ಶ್ರೀ ಶ್ರೀ ಶಾಂತ ಮಲ್ಲ ಸ್ವಾಮೀಜಿಯವರು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ವೀಣಾ ಅಚ್ಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಶಕ್ತಿ ದಿನ ಪತ್ರಿಕೆಯ ಸಂಪಾದಕರಾದ ಚಿದ್ವಿಲಾಸ್, ಮಾಚಿಮಾಂಡ ಗಂಗಾ ಸುಬ್ರಮಣಿ, ಶಾಸಕರ ಧರ್ಮ ಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ಶಾಸಕರ ಸಹೋದರರಾದ ಶ್ರೀ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಆರತಿ ಸೋಮಯ್ಯ, ಉಪಸ್ಥಿತರಿದ್ದರು.

 ಸಂಸ್ಥೆಯ ಆಡಳಿತ ಟ್ರಸ್ಟಿ ಹಾಗೂ ಮಾನ್ಯ ಶಾಸಕರ ಹಿರಿಯ ಸಹೋದರರಾದ ಶ್ರೀ ನರೇನ್ ಕಾರ್ಯಪ್ಪ ರವರು ಎಲ್ಲಾ ಗಣ್ಯರನ್ನು ಹಾಗೂ ವಿಶೇಷವಾಗಿ ಫಲಾನುಭವಿ ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇಲ್ಲಿಯ ತನಕ ದತ್ತಿನಿಧಿ ಸಂಸ್ಥೆ ವತಿಯಿಂದ ಸುಮಾರು 150 ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಿ, ಅವರುಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿರುವುದಾಗಿ ತಿಳಿಸಿದರು.

 ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಎ.ಎಸ್ ಪೊನ್ನಣ್ಣ ರವರು, ಕೊಡಗಿನ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಆರ್ಥಿಕ ಮುಗ್ಗಟ್ಟಿದ್ದಾಗಿ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು ಎಂಬ ಕಾರಣದಿಂದ, ತಂದೆ ತಾಯಿಯವರ ಹೆಸರಿನಲ್ಲಿ ಈ ಶೈಕ್ಷಣಿಕ ಕಳಕಳಿಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾಗಿ ತಿಳಿಸಿದರು. ಈಗಾಗಲೇ ನೂರಾರು ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದು, ಈ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು. ಫಲಾನುಭವಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ ಮಾನ್ಯ ಶಾಸಕರು, ಓದಿನಲ್ಲಿ ಅತ್ಯುನ್ನತ ದರ್ಜೆ ಪಡೆದು ಸಮಾಜದಲ್ಲಿ ಒಳ್ಳೆ ಸ್ಥಾನ ಪಡೆದ ಬಳಿಕ ಇಂತಹ ಕಾರ್ಯಗಳನ್ನು ನೀವುಗಳು ಸಹ ಮುಂದುವರಿಸಿ ಎಲ್ಲರಿಗೂ ಮಾದರಿಯಾಗಬೇಕೆಂದು ತಿಳಿಸಿದರು.

ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಸದಾ ಓದಿನಲ್ಲಿ ಮುಂದಿರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಅವರ ವಿದ್ಯಾಭ್ಯಾಸಕ್ಕೆ ಯಾವುದೇ ಕಾರಣಕ್ಕೂ ತೊಡಕಾಗಬಾರದು ಹಾಗೂ ಅವರ ಸಾಮರ್ಥ್ಯ ಮಂಕಾಗಬಾರದು ಎಂಬ ಈ ಮಹಾದುದ್ದೇಶ ಸಂಪನ್ನ ಆಗಬೇಕೆಂದರೆ ಎಲ್ಲಾ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

 ಶಕ್ತಿ ಪತ್ರಿಕೆಯ ಸಂಪಾದಕರಾದ ಚಿದ್ವಿಲಾಸ್ ಮಾತನಾಡಿ, ರಾಜಕೀಯ ರಹಿತವಾಗಿ ಶಾಸಕರು ಮಾಡುತ್ತಿರುವ ಹಲವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮೆಚ್ಚಿ ಅವರೊಂದಿಗೆ ತಾನು ಸದಾ ಇರುವುದಾಗಿ ಬಣ್ಣಿಸಿದರು. ಫಲಾನುಭವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಿವಿಮಾತು ಹೇಳಿದ ಚಿದ್ವಿಲಾಸ್ ರವರು, ಇದರ ಪ್ರಯೋಜನ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿನಿಯರು ತಮ್ಮ ಜೀವನದಲ್ಲಿ ಮುಂದೆ ಬರುವುದರೊಂದಿಗೆ ಈ ಸಹಾಯ ಮಾಡಿದ ಎಲ್ಲರನ್ನೂ ಕೃತಜ್ಞತಾಪೂರಕವಾಗಿ ನೆನಸಿಕೊಳ್ಳಬೇಕು ಹಾಗೂ ಧನಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

 ಸ್ವಾಮೀಜಿಯವರು ಮಾತನಾಡಿ ತಾವು  ಪೊನ್ನಣ್ಣ ರವರ ಕಾರ್ಯವೈಖರಿಯನ್ನು ಹಲವಾರು ವರ್ಷಗಳಿಂದ ಗಮನಿಸುತ್ತಿದ್ದು, ಅವರ ನಿಸ್ವಾರ್ಥ ಸೇವೆ ಹಾಗೂ ಸಾಮಾಜಿಕ-ಶೈಕ್ಷಣಿಕ ಕಳಕಳಿಯು ದೇಶಕ್ಕೇ ಮಾದರಿ ಎಂದು ಬಣ್ಣಿಸಿದರಲ್ಲದೆ, ಅವರಿಗೆ ಮತ್ತಷ್ಟು ಉನ್ನತ ಹುದ್ದೆ ದೊರಕಲಿ ಎಂದು ಆಶೀರ್ವದಿಸಿದರು.

 ಕಾರ್ಯಕ್ರಮದ ಬಗ್ಗೆ , ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ ಮತ್ತಿತರ ಗಣ್ಯರು ಮೆಚ್ಚುಗೆಯ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಮಕ್ಕಳ ಪೋಷಕರು, ವಿರಾಜಪೇಟೆ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪಕ್ಷದ ವಿವಿಧ ಘಟಕಗಳ ಪ್ರಮುಖರು ಹಾಗೂ ಪದಾಧಿಕಾರಿಗಳು, ಸರ್ಕಾರಿ ನಾಮನಿರ್ದೇಶತ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಮಂಜುನಾಥ್ ಮಾಸ್ಟರ್ ರವರು ಕಾರ್ಯಕ್ರಮ ನಿರೂಪಿಸಿದರು.